- Advertisement -
ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿರುವ ಬಿಜೆಪಿ-ಜೆಡಿಎಸ್ ದೋಸ್ತಿಗೆ ಒಂದೊಂದೇ ವಿಘ್ನಗಳು ಎದುರಾಗುತ್ತಿವೆ. ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಆಪ್ತ ಎಂ.ರುದ್ರೇಶ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಜುಲೈ 26ರಂದು ಯಶವಂತಪುರದ ಎಂ.ರುದ್ರೇಶ್ ಅವರ ನಿವಾಸದಲ್ಲಿ ನಡೆದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂ.ರುದ್ರೇಶ್ ಅವರನ್ನು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಅವರ ಗೆಲುವು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈಗಾಗಲೇ ಜನ ಎಂ.ರುದ್ರೇಶ್ ಅವರನ್ನು ಶಾಸಕರಾಗಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ದೊಡ್ಡ ಅಂತರ ಮತಗಳಿಂದ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದರು.
ಯಡಿಯೂರಪ್ಪ ನವರು ತಮ್ಮ ಆಪ್ತ ಎಂ.ರುದ್ರೇಶ್ ಗೆ ಈಗಲೇ ಟಿಕೆಟ್ ಘೋಷಣೆ ಮಾಡಿರುವುದು ಸರಿಯಲ್ಲ. ಜೆಡಿಎಸ್ ಜತೆಗೆ ಮೈತ್ರಿ ಇರುವಾಗ ಏಕಪಕ್ಷೀಯವಾಗಿ ಟಿಕೆಟ್ ಘೋಷಣೆ ಸರಿಯಲ್ಲ ಎಂದು ಪಕ್ಷದಲ್ಲೇ ಚರ್ಚೆಗಳು ಆರಂಭಗೊಂಡಿದ್ದು, ಆಕ್ರೋಶ ಮುಗಿಲು ಮುಟ್ಟಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಂ.ರುದ್ರೇಶ್, ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. 2008ರಲ್ಲೇ ಯಶವಂತಪುರಕ್ಕೆ ಅಭ್ಯರ್ಥಿಯಾಗಬೇಕಿತ್ತು. ಆದರೆ, ಪಕ್ಷದ ಸೂಚನೆ ಮೇರೆಗೆ ರಾಮನಗರಕ್ಕೆ ಹೋಗಿದ್ದೆ. ಟಿಕೆಟ್ ಸಂಬಂಧ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಯಡಿಯೂರಪ್ಪ ಅವರು ನನ್ನ ಹೆಸರು ಘೋಷಣೆ ಮಾಡುವಾಗ ಜೆಡಿಎಸ್‌ನ ಜವರಾಯಿಗೌಡ ಸಹ ಇದ್ದು, ಖುಷಿಪಟ್ಟಿದ್ದಾರೆ. ನನ್ನ ಮೇಲಿನ ಪ್ರೀತಿಯಿಂದ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದಿದ್ದಾರೆ.
ಈ ವಿಚಾರವಾಗಿ ಬಿ ವೈ ವಿಜಯೇಂದ್ರ ಕೂಡ ಪ್ರತಿಕ್ರಿಯಿಸಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಹಿರಿಯರು. ಪಕ್ಷದ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸದಸ್ಯರು. ಎಂ.ರುದ್ರೇಶ್ ಅವರ ಮೇಲಿನ ಪ್ರೀತಿಯಿಂದ ಈ ಹೇಳಿಕೆ ನೀಡಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್ ಮಾಡಲಿದೆ. ಟಿಕೆಟ್ ಕುರಿತು ನಮ್ಮ ಕೋರ್ ಕಮಿಟಿ ಚರ್ಚಿಸಲಿದೆ. ಸದ್ಯಕ್ಕೆ ಚುನಾವಣೆ ಇಲ್ಲ. ಯಾವುದೇ ಕ್ಷೇತ್ರದ ಟಿಕೆಟ್ ಅಂತಿಮ ಮಾಡುವುದು ಹೈಕಮಾಂಡ್. ಶಿಕಾರಿಪುರ ಸೇರಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ಯಶವಂತಪುರ ಬಿಜೆಪಿ ಟಿಕೆಟ್ ವಿಚಾರ ಬಾರೀ ಚರ್ಚೆಯಲ್ಲಿದ್ದು, ಬಿಜೆಪಿಯಲ್ಲಿ ಒಳ ಮುನಿಸುಗಳು ಪ್ರಾರಂಭವಾಗಿದೆ. ಈ ಬಗ್ಗೆ BJP ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯುಸುತ್ತದೆ. ಯಶವಂತಪುರ ಟಿಕೆಟ್ ಆಕಾಂಕ್ಷಿಯಾಗಿ ಎಂ.ರುದ್ರೇಶ್ ಅವರೆ ಇರಲಿದ್ದರಾ ಎಲ್ಲವನ್ನೂ ಕಾದು ನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ
- Advertisement -