Political News: ಬೆಂಗಳೂರು: ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಎನ್ನುವ ಘೋಷ ವಾಕ್ಯದೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದ ಜೆಡಿಎಸ್ ಪಕ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ಸರಣಿ ದರ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಸಂಸದರಾದ ಮಲ್ಲೇಶ್ ಬಾಬು ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅಧಿಕಾರಕ್ಕೆ ಬಂದಾಗಿನಿಂದ ದರ ಏರಿಕೆ
ಸುರೇಶ್ ಬಾಬು, ಹೆಚ್.ಡಿ. ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಹಿರಿಯ ಶಾಸಕ ಎಂ.ಟಿ. ಕೃಷ್ಣಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಎ ತಿಪ್ಪೇಸ್ವಾಮಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಐದು ಗ್ಯಾರಂಟಿ ಕೊಟ್ಟಿದೆ ನಿಜ. ಆದರೆ, ಗ್ಯಾರಂಟಿ ಪಡೆದ ಪಾಪಕ್ಕೆ ಜನರು ದಿನನಿತ್ಯ ಬೆಲೆ ಏರಿಕೆ ಬರೆಗೆ ತುತ್ತಾಗುತ್ತಿದ್ದಾರೆ. ದಿನಕ್ಕೊಂದು ದರ ಏರಿಕೆ ಮಾಡುತ್ತಿದ್ದಾರೆ. ಕೊಟ್ಟಿದ್ದು ಅಲ್ಪ, ಜನರ ಮೇಲೆ ಬೆಟ್ಟದಷ್ಟು ಹೇರಿಕೆ ಮಾಡಿದ್ದಾರೆ. ಇದನ್ನು ಸಹಿಸುವ ಅಗತ್ಯ ಇಲ್ಲ. ಜನರು ಸರ್ಕಾರದ ವಿರುದ್ಧ ದಂಗೆ ಏಳದೇ ಬೇರೆ ದಾರಿ ಇಲ್ಲ ಎಂದು ನಾಯಕರು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು. ಎಲ್ಲೆಡೆ ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಎನ್ನುವ ಫಲಕಗಳು ರಾರಾಜಿಸಿದವು.
ವಿಧಾನಸೌಧ ಮುತ್ತಿಗೆ ಯತ್ನಿಸಿದ ನಾಯಕರ ಬಂಧನ, ಬಿಡುಗಡೆ
ಪ್ರತಿಭಟನಾ ಸಭೆ ಮುಕ್ತಾಯವಾದ ನಂತರ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾಯಕರು, ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ಅಡ್ಡಗಟ್ಟಿದ ಪೊಲೀಸರು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮುಖಂಡರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಶಾಸಕರಿಗೆ ಆಮಿಷ ಒಡ್ಡುತ್ತಿರುವ ಬಗ್ಗೆ ನೇರ ಆರೋಪವನ್ನೇ ಮಾಡಿದರು.
ನಾನು ನನ್ನ ಕ್ಷೇತ್ರಕ್ಕೆ ಪಾಲಿಟೆಕ್ನಿಕ್ ಕಾಲೇಜು ಕೊಡಿ ಎಂದು ಕೇಳಿದರೆ ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಕರೆಯುತ್ತಾರೆ ಸಿದ್ದರಾಮಯ್ಯ. ಒಬ್ಬ ಮುಖ್ಯಮಂತ್ರಿ ಹೀಗೆ ಮಾಡಬಹುದಾ? ಎಂದು ಬೇಸರ ವ್ಯಕ್ತಪಡಿಸಿದರು ಅವರು.
ನಾವು ಎಂಎಲ್ಎ ಗಳಾಗಿ ಎರಡು ವರ್ಷವಾಯಿತು. ಕ್ಷೇತ್ರಗಳ ಅಭಿವೃದ್ಧಿಗೆ ಕೊನೆಪಕ್ಷ ₹50 ಕೋಟಿ ಕೊಟ್ಟಿಲ್ಲ. ಒಂದು ರಸ್ತೆಯ ಗುಂಡಿ ಮುಚ್ಚೋಕೆ ದುಡ್ಡು ಕೊಡುತ್ತಿಲ್ಲ. ಬರೀ ಲೂಟಿ ಬಿಟ್ಟರೆ ಬರೀ ಏನು ಮಾಡುತ್ತಿಲ್ಲ. ಇದು ದಾರಿದ್ರ್ಯ ಸರ್ಕಾರ. ಗುಂಡಿ ಮುಚ್ಚೋಕೆ ಯೋಗ್ಯತೆ ಇಲ್ಲದವರು ಎರಡು ಸಾವಿರ ದುಡ್ಡು ಕೊಡ್ತಾರೆ. ಪಾಲಿಟೆಕ್ನಿಕ್ ಕಾಲೇಜು ಕೇಳಿದ್ರೆ ಕಾಂಗ್ರೆಸ್ ಗೆ ಬಾ ಅಂತಾರೆ ಸಿದ್ದರಾಮಯ್ಯ. ಯಾಕಪ್ಪ ಕಾಂಗ್ರೆಸ್ಸೂ..? ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ. ನಾನು ಇನ್ನೂ ಇಪ್ಪತ್ತು ವರ್ಷಗಳಾದರೂ ಜೆಡಿಎಸ್ ನಲ್ಲಿಯೇ ಇರುತ್ತೇನೆ ಎಂದು ಅವರು ಹೇಳಿದರು.