Bengaluru news: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಆಯೋಜಿಸಿದ್ದ, ಉದ್ಯಮಿ ಒಕ್ಕಲಿಗ ಎಫ್ ಸಿ ಎಕ್ಸ್ಪೋ- 2025 ಕಾರ್ಯಕ್ರಮಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ನಿರ್ಮಲಾನಂದ ಶ್ರೀಗಳು, ಒಕ್ಕಲಿಗ ಸಮುದಾಯದವರು ಕೃಷಿ ಚಟುವಟಿಕೆ ಮೂಲಕ ಅನ್ನದಾತರಾಗಿದ್ದು, ಈಗ ಉದ್ಯಮವನ್ನು ಸ್ಥಾಪಿಸಿ, ದೇಶದ ಅಭಿವೃದ್ಧಿಗೂ ಕೊಡುಗೆ ನೀಡುವಂತಾಗಬೇಕು ಎಂದು ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ನಾಡಿನಲ್ಲಿ ಒಕ್ಕಲಿಗ ಸಮಾಜಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಬೀಜ ಬಿತ್ತಿ, ಹೆಮ್ಮರವಾಗಿ ಬೆಳೆಯುವಂತೆ ಮಾಡಿರುವ ಸಮಾಜವೂ, ವಿಭಿನ್ನ ಆಲೋಚನೆ ಮೂಲಕ, ಏಳಿಗೆ ಹೊಂದಬೇಕು. ಅದಕ್ಕೆ ಪೂರಕವಾಗಿ ಈ ಕಾರ್ಯಕ್ರಮ ನಡೆದಿರುವುದು, ಒಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಎಂದು ಶ್ರೀಗಳು ಹೇಳಿದರು.

ದೇಶದಲ್ಲಿ ಕೃಷಿ ಕೈಗಾರಿಕೆ ಮತ್ತು ಡಿಜಿಟಲ್ ಯುಗದ ಬಳಿಕ, ಎಐ ಯುಗ ಶುರುವಾಗಿದೆ. ಯುವ ಜನತೆ ಆಧುನಿಕ ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಜ್ಞಾನ ಪಡೆಯಬೇಕು. ಈ ಮೂಲಕ ದೇಶಕ್ಕೆ ಸೇವೆ ಲಭಿಸಬೇಕು ಎಂದರು.

ಇದೇ ವೇಳೆ ಕೃಷಿ ಸಚಿವ ಚೆಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು, ಒಕ್ಕಲಿಗರು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಬಲವಾಗಿದ್ದಾರೆ. ಇದೀಗ ಉದ್ಯಮ ಕ್ಷೇತ್ರವೂ ಮತ್ತಷ್ಟು ಬಲವಾಗಬೇಕಿದೆ. ಒಕ್ಕಲಿಗರು ಸಮಾಾಜದ ಅಸ್ತಿತ್ವ ಕಾಪಾಡಿಕೊಳ್ಳುವುದರ ಜೊತೆಗೆ, ಯುವಜನತೆಯನ್ನೂ ಉದ್ಯಮದಲ್ಲಿ ಅಭಿವೃದ್ಧಿಗೊಳಿಸಲು ಫಸ್ಟ್ ಸರ್ಕಲ್ ಸೊಸೈಟಿ ಮುಂದಾಗಿದೆ ಎಂದರು.




