Friday, October 18, 2024

Latest Posts

ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ರಾಕ್ಷಸರಾಗಿ ಬದಲಾಗ್ತಾರೆ

- Advertisement -

ಮೈಸೂರು ಮೂಲದ ಒಂದಷ್ಟು ಪ್ರತಿಭಾವಂತರೇ ಸೇರಿಕೊಂಡು ಥ್ರಿಲ್ಲರ್ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ ಹೆಸರು ನಾನೇ ನರರಾಕ್ಷಸ. ಸ್ವರ್ಣಾಂಬಾ ಪ್ರೊಡಕ್ಷನ್ಸ್ ಮೂಲಕ ಬಿ.ರಾಧಾ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅವರ ಪುತ್ರ ರಾಜ್‌ಮನೀಶ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್‌ಕಟ್ ಹೇಳಿದ್ದಾರೆ. ಜೊತೆಗೆ ಅವರೇ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಗಟ್ಟಿಮೇಳ ಸೇರಿದಂತೆ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿ ಗುರ್ತಿಸಿಕೊಂಡಿರುವ ರಾಜ್ ಮನೀಶ್ ಇದೇ ಮೊದಲಬಾರಿಗೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಹಾರರ್, ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಲಿರಿಕಲ್ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು,
ಈ ಸಂದರ್ಭದಲ್ಲಿ ನಾಯಕ ಹಾಗೂ ನಿರ್ದೇಶಕ ರಾಜ್‌ಮನೀಶ್ ಮಾತನಾಡುತ್ತ ಗಟ್ಟಿಮೇಳ ಅಲ್ಲದೆ ಹರಹರ ಮಹದೇವ, ಶನಿ, ಮಹಾಕಾಳಿ, ಸಂಘರ್ಷ ಸೇರಿ ಹಲವಾರು ಸೀರಿಯಲ್‌ಗಳಲ್ಲೂ ನಟಸಿದ್ದಲ್ಲದೆ ಪ್ರೊಡಕ್ಷನ್ ನಂ.೧ ಎಂಬ ಚಿತ್ರದಲ್ಲಿ ನಾಯಕನಾಗೂ ನಟಿಸಿದ್ದೆ, ನಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ನಮ್ಮ ತಾಯಿಯವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾನು ಎರಡನೇ ಬಾರಿಗೆ ನಾಯಕನಾಗಿದ್ದೇನೆ. ಅಲ್ಲದೆ ಫಸ್ಟ್ ಟೈಮ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಪ್ರತಿಯೊಬ್ಬ ಮನಷ್ಯನ ಒಳಗೂ ಒಬ್ಬ ರಾಕ್ಷಸನಿರುತ್ತಾನೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗ್ತಾರೆ ಎನ್ನುವುದೇ ಈ ಕಥೆಯ ತಿರುಳು. ನಮ್ಮ ಸಿನಿಮಾ ವೀಕ್ಷಿಸುವಾಗ ಮುಂದೆ ಹೀಗೆ ನಡೆಯುತ್ತೆ ಅಂತ ಯಾರೂಸಹ ಊಹಿಸಲು ಸಾಧ್ಯವೇ ಇಲ್ಲ, ಕೊನೆಯವರೆಗೂ ಕುತೂಹಲ ಕ್ಯಾರಿ ಆಗುತ್ತದೆ. ಮೈಸೂರು, ಬನ್ನೂರು ಸುತ್ತಮುತ್ತಲ ಕಾಡಿನಲ್ಲಿ ಕಲ್ಲು ಮುಳ್ಳಿನ ನಡುವೆ ಸುತ್ತಾಡಿ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ೪ ಹಾಡುಗಳಿದ್ದು ನೀತು ನಿನಾದ್ ಸಂಗೀತ ಸಂಯೋಜಿಸಿದ್ದಾರೆ. ಈಗ ರೊಮ್ಯಾಂಟಿಕ್ ಸಾಂಗ್ ರಿಲೀಸಾಗಿದ್ದು, ಒಂದು ಜರ್ನಿಸಾಂಗ್, ಥೀಮ್‌ಸಾಂಗ್ ಜೊತೆಗೆ ಡಾ.ರಾಜ್‌ಕುಮಾರ್ ಅವರ ಬಗ್ಗೆಯೂ ಒಂದು ಹಾಡಿದೆ. ನನ್ನದು ರಫ್ ಹುಡುಗನ ಪಾತ್ರ, ಕಾಡಿನ ಮಧ್ಯೆ ಸಿಕ್ಕಿ ಹಾಕಿಕೊಂಡು ಹೇಗೆ ಸಫರ್‌ಪಡುತ್ತೇನೆ. ಅದರಿಂದ ಉಳಿದವರೂ ಸಹ ಹೇಗೆ ತೊಂದರೆಗೆ ಸಿಕ್ಕಿ ಹಾಕಿಕೊಳ್ತಾರೆ, ಆ ಭಯಂಕರ ಕಾಡಿಗೆ ಅವರೆಲ್ಲ ಏಕೆ ಹೋದರು ಅನ್ನುವುದೇ ಕುತೂಹಲ. ಚಿತ್ರದಲ್ಲಿ ಹಲವಾರು ಟ್ವಿಸ್ಟ್ ಗಳಿವೆ ಎಂದು ಹೇಳಿದರು. ಚಿತ್ರದ ಮತ್ತೊಬ್ಬ ನಾಯಕ ಸುನಿಲ್ ಸ್ವಾಮಿರಾಜು ಮಾತನಾಡುತ್ತ ಮೈಸೂರಿನ ರಂಗಾಯಣದಲ್ಲಿ ಕಲಿತಮೇಲೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದೆ. ಈ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದೇನೆ. ಹಾರರ್, ಸಸ್ಪೆನ್ಸ್ ಜೊತೆಗೆ ಥ್ರಿಲ್ಲರ್ ಅನುಭವ ನೀಡುವ ಚಿತ್ರವಿದು. ನಾಯಕ, ನಾಯಕನ ಸ್ನೇಹಿತೆ ಹಾಗೂ ನನ್ನ ನಡುವೆ ಏನಾಗುತ್ತೆ? ಎನ್ನುವುದೇ ಸಸ್ಪೆನ್ಸ್, ನನ್ನ ಪಾತ್ರಕ್ಕೆ ಎರಡು ಶೇಡ್ ಇದೆ ಎಂದರು.
ಕೊಳ್ಳೇಗಾಲ ಮೂಲದ ದಿವ್ಯಾಕುಮಾರ್ ಚಿತ್ರದಲ್ಲಿ ಖಳನಾಯಕ ಸ್ನೇಕ್‌ಶಂಕರನಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಚಂದ್ರ ಅವರ ಛಾಯಾಗ್ರಹಣವಿದ್ದು, ಫ್ಲೂಟಿಸ್ಟ್ ಹಾಗೂ ಸರಿಗಮಪ ಸ್ಪರ್ಧಿಯಾಗಿದ್ದ ನೀತು ನಿನಾದ್ ಅವರು ಚಿತ್ರದ ೪ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯದಲ್ಲೇ ಹಿನ್ನೆಲೆ ಸಂಗೀತ ಅಳವಡಿಸುವ ಕಾರ್ಯ ಪ್ರಾರಂಭಿಸಲಿದ್ದಾರೆ. ಉಳಿದಂತೆ ಸೇತುರಾಮ್ ಪತ್ರಕರ್ತನಾಗಿ, ಪ್ರಸಾದ್ ಸಿಐಡಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಮೈಸೂರು ಮೂಲದ ರಾಘವೇಂದ್ರ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿದ್ದ ನಾನೇ ನರರಾಕ್ಷಸ ಚಿತ್ರವೀಗ ರೀರೆಕಾರ್ಡಿಂಗ್ ಹಂತದಲ್ಲಿದ್ದು, ಮೇ ಮೊದಲವಾರ ಚಿತ್ರವನ್ನು ತೆರೆಗೆ ತರುವ ಪ್ಲಾನಿದೆ.

- Advertisement -

Latest Posts

Don't Miss