ಬೆಂಗಳೂರು: ರಾಜೀನಾಮೆ ನೀಡಿ ಮುಂಬೈ ಸೇರಿ ಸರ್ಕಾರ ಪತನಕ್ಕೆ ಕಾರಣರಾಗಿರುವ ಅತೃಪ್ತರ ಪೈಕಿ ಇಬ್ಬರು ಪಕ್ಷಕ್ಕೆ ವಾಪಸ್ಸಾಗಲು ಯತ್ನಿಸುತ್ತಿದ್ದಾರೆ ಅಂತ ಮಾಜಿ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ದೋಸ್ತಿ ಸರ್ಕಾರ ಪತನವಾಗಲು ನಾಂದಿ ಹಾಡಿದ್ದ ಅತೃಪ್ತರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತೆ ಪಕ್ಷಕ್ಕೆ ವಾಪಸ್ಸಾಗಲು ಯತ್ನಿಸಿದ್ದು, ಅವರು ಸಿಎಲ್ ಪಿ ನಾಯಕ ಸಿದ್ದರಾಮಯ್ಯರಿಗೆ ದೂರವಾಣಿ ಕರೆ ಮಾಡಿದ್ದರು ಅಂತ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಈ ಕುರಿತು ಮಾತನಾಡಿದ ಪಾಟೀಲ್, ಅತೃಪ್ತರು ದೂರವಾಣಿ ಕರೆ ಮಾಡಿದ್ರೂ ಸಿದ್ದರಾಮಯ್ಯ ಅವರ ಕರೆಯನ್ನೇ ಸ್ವೀಕರಿಸಲಿಲ್ಲ ಅಂತ ತಿಳಿಸಿದ್ರು. ಬಳಿಕ ಮಾತನಾಡಿದ ಅವರು, ಪಕ್ಷಕ್ಕೆ ಮರಳುವ ಉದ್ದೇಶದಿಂದ ಆ ಇಬ್ಬರು ಅತೃಪ್ತ ಶಾಸಕರು ಇನ್ನೂ ಯಾರನ್ನು ಸಂಪರ್ಕಿಸಿದ್ದಾರೋ ಗೊತ್ತಿಲ್ಲ ಅಂತ ಶಾಸಕರ ಹೆಸರು ಹೇಳದೆ ಮಾಹಿತಿ ನೀಡಿದ್ರು.
ಇನ್ನು ಸಿದ್ದರಾಮಯ್ಯ,ಎಚ್.ಡಿ ಕುಮಾರಸ್ವಾಮಿ ಕೂಡ ಸದನದಲ್ಲಿ ವಿಶ್ವಾಸಮತ ಯಾಚನೆ ಸಮಯದಲ್ಲಿ ಜಗತ್ತೇ ಪ್ರಳಯವಾದರೂ ಸರಿ, ಅತೃಪ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳೋದಿಲ್ಲ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ರು. ಹೀಗಾಗಿ ಒಂದೊಮ್ಮೆ ಅತೃಪ್ತರು ಮತ್ತೆ ಸೇರಬಯಸಿದರೂ ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಅನ್ನೋದನ್ನ ಸದ್ಯದ ಮಟ್ಟಿಗೆ ಅಲ್ಲಗಳೆಯುವಂತಿಲ್ಲ.