Sunday, April 20, 2025

Latest Posts

ಬಯಲಾಯ್ತು ರಾಜೇಂದ್ರ ಹ*ತ್ಯೆಯ ಸ್ಫೋಟಕ ಆಡಿಯೋ : ಪೊಲೀಸರ ನಿದ್ದೆಗೇಡಿಸಿದ ಆಪ್ತೆಯ ಸಂಭಾಷಣೆ

- Advertisement -

Political News: ಸಚಿವ ಕೆ.ಎನ್‌. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿರುವ ಸಂಚಿನ ಕುರಿತು ಬಗೆದಷ್ಟು ಒಂದೊಂದು ಮಾಹಿತಿ ಹೊರಬೀಳುತ್ತಿದ್ದು, ಇದೀಗ ಇದಕ್ಕೆ ಸಂಬಂಧಿಸಿರುವ ಆಡಿಯೋ ಒಂದು ರಾಜಕೀಯದಲ್ಲಿ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ. ಕಳೆದೆರಡು ದಿನಗಳ ಹಿಂದಷ್ಟೇ ರಾಜೇಂದ್ರ ಅವರು ತುಮಕೂರು ಎಸ್‌ಪಿ ಅವರಿಗೆ ತಮ್ಮ ಕೊಲೆಯ ಸಂಚಿನ ಕುರಿತು ಸೂಕ್ತ ತನಿಖೆಯನ್ನು ನಡೆಸುವಂತೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಮುಂದುವರೆಸಿದ್ದಾರೆ. ಅವರಿಗೆ ಈಗ ಈ ಆಡಿಯೋ ಸಾಕಷ್ಟು ನೆರವಾಗಲಿದೆ ಎನ್ನಲಾಗುತ್ತಿದೆ.

ಪೆನ್‌ಡ್ರೈವ್‌ ನೀಡಿದ್ದೇನೆ ಎಂದಿದ್ದ ರಾಜೇಂದ್ರ..

ಇನ್ನೂ ತಾವು ದೂರು ನೀಡಿದ್ದ ಬಳಿಕ ರಾಜೇಂದ್ರ ತಮ್ಮ ಹೇಳಿಕೆಯಲ್ಲಿ 18 ನಿಮಿಷದ ಆಡಿಯೋ ಒಂದರ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ ಇದಕ್ಕೆ ಸಂಬಂಧಿಸಿದ್ದಂತೆ ಒಂದು ಪೆನ್‌ಡ್ರೈವ್‌ ಕೂಡ ಪೊಲೀಸರಿಗೆ ನೀಡಿದ್ದೇನೆ ಎಂದು ಹೇಳಿದ್ದರು. ಅದರಲ್ಲಿನ ಆಡಿಯೋ ಈಗ ಹೊರಬಿದ್ದಿದ್ದು ಕೊಲೆಯ ಸಂಚಿನ ಬಗ್ಗೆ ಮಹಿಳೆಯೊಬ್ಬಳು ಇಂಚಿಂಚಾಗಿ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾಳೆ. ರಾಜೇಂದ್ರ ಆಪ್ತ ರಾಕಿ ಹಾಗೂ ಸೋಮನ ಆಪ್ತೆ ಪುಷ್ಪಾ ಎಂಬುವವರ ನಡುವಿನ ಮಹತ್ವದ ಆಡಿಯೋ ಸಂಭಾಷಣೆ ಇದಾಗಿದೆ.

ಆಪ್ತೆ ಬಳಿ ಹೇಳಿಕೊಂಡಿದ್ದ ಸೋಮ..

ಅಂದಹಾಗೆ ರಾಜೇಂದ್ರ ಕೊಲೆ ಸಂಚಿನಲ್ಲಿ ಎ1 ಆರೋಪಿಯಾಗಿರುವ ಸೋಮ ಯಾವ ರೀತಿಯಾಗಿ ಪ್ಲಾನ್‌ ಮಾಡಬಹುದು ಎಂದು ಯೋಚಿಸುತ್ತಿದ್ದ. ಇದಕ್ಕಾಗಿ 70 ಲಕ್ಷ ರೂಪಾಯಿಗಳ ಡೀಲ್‌ನ ಬಗ್ಗೆಯೂ ಚರ್ಚೆಯಾಗಿತ್ತು. ಇನ್ನೂ ಈ ಹತ್ಯೆಯ ಸಂಚಿನ ಬಗ್ಗೆ ನೋಡೋದಾದರೆ. ಪ್ರಮುಖವಾಗಿ ತಾನು ರಾಜೇಂದ್ರ ಕೊಲೆಗೆ ಸುಪಾರಿ ಪಡೆದುಕೊಂಡಿರುವುದಾಗಿ ಸೋಮ ತನ್ನ ಆಪ್ತೆ ಪುಷ್ಪಾ ಬಳಿ ಮಾಹಿತಿ ಹಂಚಿಕೊಂಡಿದ್ದಾನೆ. ಎಷ್ಟೇ ಆದರೂ ತನಗೆ ಕ್ಲೋಸ್‌ ಅಂತ ಸೋಮ ಹಾರಹಾಕಿದ್ದ ವಿಚಾರದ ಬಗ್ಗೆ ಪುಷ್ಪಾ ಹೆಚ್ಚಿನ ಮಾಹಿತಿ ಹೆಕ್ಕಿ ತೆಗೆದಿದ್ದಳು. ಹೇಗಾದರೂ ಮಾಡಿ ಸೋಮ ರೂಪಿಸಿರುವ ಕೊಲೆಯ ಸಂಚಿನ ಕುರಿತು ರಾಜೇಂದ್ರ ಅವರ ಗಮನಕ್ಕೆ ತಂದು ಎಚ್ಚರಿಸಬೇಕೆಂದು ಪುಷ್ಪಾ ತಿಳಿದಿದ್ದಾಳೆ. ಬಳಿಕ ಇದಕ್ಕಾಗಿ ರಾಜೇಂದ್ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಕಿ ಎನ್ನುವ ಯುವಕನನ್ನು ಸಂಪರ್ಕಿಸಿ ಸೋಮ ರಾಜೇಂದ್ರ ಕೊಲೆಗೆ ಸ್ಕೆಚ್‌ ಹಾಕಿರುವ ವಿಚಾರವನ್ನು ವಿವರಿಸಿದ್ದಾಳೆ. ಅಲ್ಲದೆ‌ ತನ್ನ ಹಾಗೂ ಪುಷ್ಪಾಳ ನಡುವಿನ ಸಂಭಾಷಣೆಯನ್ನು ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದನು. ಅಲ್ಲದೆ ಈ ಆಡಿಯೋವನ್ನೇ ಕೇಳಿಸಿಕೊಂಡಿದ್ದ ರಾಜೇಂದ್ರ ಮರು ಕ್ಷಣ ಶಾಕ್‌ ಆಗಿದ್ದರು. ತಕ್ಷಣವೇ ಎಚ್ಚೆತ್ತು ತುಮಕೂರು ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು.

ರಾಜೇಂದ್ರ ಬಳಿ ನನ್ನ ಕರೆದುಕೊಂಡು ಹೋಗು..

ಇನ್ನೂ ಕಳೆದ ನವೆಂಬರ್‌ನಲ್ಲಿ ಎಂಎಲ್‌ಸಿ ರಾಜೇಂದ್ರ ಅವರ ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಗ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸಹ ಸೋಮನೇ ಕಳುಹಿಸಿದ್ದ, ಆ ಸಮಯದಲ್ಲಿಯೇ ಕೊಲೆಗೆ ಯತ್ನ ನಡೆದಿತ್ತು. ಅಲ್ಲದೇ ಸೋಮನಿಗೆ 5 ಲಕ್ಷ ರೂಪಾಯಿ ಹಣ ಬಂದಿರುವುದು ಸತ್ಯ ಸತ್ಯ ಸತ್ಯವೇ ಆಗಿದೆ. ಇನ್ನೂ ಅವನನ್ನು ಪೊಲೀಸರು ಕರೆದುಕೊಂಡು ಹೋಗಿ ವಿಚಾರಿಸಿದರೆ ಎಲ್ಲವೂ ಗೊತ್ತಾಗುತ್ತದೆ. ಅಂದಹಾಗೆ ರಾಜೆಂದ್ರ ಅವರೆದುರು ಈ ವಿಚಾರ ನಾನೇ ಹೇಳುತ್ತೇನೆ, ನನ್ನ ಕರೆದುಕೊಂಡು ಹೋಗು ಎಂಬುದಾಗಿ ರಾಕಿಗೆ ಪುಷ್ಪಾ ಮನವಿ ಮಾಡಿಕೊಂಡಿದ್ದಾಳೆ. ಇಷ್ಟೇ ಅಲ್ಲದೆ ಜೈಪುರದ ಇನ್ನೋರ್ವ ರೌಡಿಶೀಟರ್ ಪ್ರಸಿಯನ್ನೂ ಕೊಲೆ ಮಾಡ್ತೀನಿ ಅಂತ ಸೋಮ ಹೇಳಿದ್ದಾನೆ. ಅದಕ್ಕಾಗಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರನ್ನು ಸೋಮ ಕರೆಸಿಕೊಳ್ಳುತ್ತಿದ್ದಾನೆ. ಇನ್ನೂ ಈಗಾಗಲೇ ಜೈಲಿನಲ್ಲಿರುವ ಸ್ಟೀಫನ್, ಗುಂಡನನ್ನ ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಲಾನ್ ಮಾಡಿದ್ದಾನೆ. ಅವನನ್ನು ಕರೆಸಿ ನೆಟ್‌ವರ್ಕ್ ಬರದೇ ಇರುವ ಜಾಗದಲ್ಲಿ ಇರುವ ಹಾಗೆ ಮನೆ ಮಾಡುತ್ತಿದ್ದಾನೆ ಎಂಬ ರಹಸ್ಯ ಹಾಗೂ ಸ್ಪೋಟಕ ವಿಚಾರಗಳನ್ನು ಪುಷ್ಪಾ ರಾಕಿಯೊಂದಿಗೆ ಹಂಚಿಕೊಂಡಿದ್ದಾಳೆ. ಈ ಆಡಿಯೋ ಇಡೀ ಪ್ರಕರಣಕ್ಕೆ ಮಹತ್ವದ ಸುಳಿವು ನೀಡಿದಂತಾಗಿದೆ. ಇದಾದ ಬೆನ್ನಲ್ಲೇ ಮಹಿಳೆ ಪುಷ್ಪಾ ಸೇರಿದಂತೆ ಇನ್ನಿಬ್ಬರನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಆಡಿಯೋ ಪಡೆದುಕೊಂಡಿರುವ ಪೊಲೀಸರು ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಆರೋಪಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss