ನಕಲಿ ಪೊಲೀಸರಿಂದ ₹1.74 ಕೋಟಿ ವಂಚನೆ!

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಕಲಿ ಪೊಲೀಸ್ ಅಧಿಕಾರಿಗಳು ನಡೆಸಿದ ಸೈಬರ್ ವಂಚನೆಯಲ್ಲಿ 69 ವರ್ಷದ ವೃದ್ಧನೊಬ್ಬರು ₹1.74 ಕೋಟಿ ಕಳೆದುಕೊಂಡ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಯಲ್ಲಾಪುರ ತಾಲೂಕಿನ ಉಮ್ಮಚಗಿ ನಿವಾಸಿ ಹಾಗೂ ನಿವೃತ್ತ LIC ಏಜೆಂಟ್ ಶಿವಾನಂದ್ ಹೆಗಡೆ (69) ಎಂಬುವವರಿಗೆ ನಖಲಿ ಪೊಲೀಸರು ವಂಚಿಸಿದ್ದಾರೆ. ತೋಟದ ಕೆಲಸ ಮುಗಿಸಿ ಮನೆಯಲ್ಲಿ ಇದ್ದ ಸಮಯದಲ್ಲಿ ನಕಲಿ ಮುಂಬೈ ಪೊಲೀಸ್ ಇಲಾಖೆಯಿಂದ ಕರೆ ಬಂದಿತ್ತು.

ಕರೆ ಮಾಡಿದವರು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಹೆಗಡೆಯವರ ಬ್ಯಾಂಕ್ ಖಾತೆ ಬಳಸಿ ಅಕ್ರಮ ಹಣ ವರ್ಗಾವಣೆ ನಡೆದಿದೆ, ಎಂದು ಸುಳ್ಳು ಆರೋಪ ಮಾಡಿದ್ದಾರೆ. ಬಳಿಕ ವಿಡಿಯೋ ಕಾಲ್ ಮೂಲಕ ಐಪಿಎಸ್ ಹಾಗೂ ಡಿಐಜಿ ಅಧಿಕಾರಿಗಳಂತೆ ನಟಿಸಿ ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಗಳಂತೆ ಮಾತನಾಡಿದ ವಂಚಕರು, “ರಿಸರ್ವ್ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬೇಕು, ಇಲ್ಲದಿದ್ದರೆ ಬಂಧನ ಮಾಡಲಾಗುತ್ತದೆ”. ಎಂದು ಬೆದರಿಕೆ ಹಾಕಿದ್ದಾರೆ. ಭಯಗೊಂಡ ಹೆಗಡೆ ಅವರು ಏಪ್ರಿಲ್ 21ರಿಂದ 24ರ ನಡುವೆ ಹಂತ ಹಂತವಾಗಿ ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಒಟ್ಟು ₹1.74 ಕೋಟಿ ಹಣ ವರ್ಗಾಯಿಸಿದ್ದಾರೆ.

ನಂತರ ಇದು ಸೈಬರ್ ವಂಚನೆ ಎಂಬುದು ತಿಳಿದುಬಂದ ಬಳಿಕ ಅವರು ಕಾರವಾರ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಇಂತಹ “ಡಿಜಿಟಲ್ ಅರೆಸ್ಟ್” ಹೆಸರಿನ ವಂಚನೆಗಳಿಗೆ ಎಚ್ಚರಿಕೆಯಿಂದ ಇರಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

About The Author