Haveri News: ಹಾನಗಲ್: ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಕೆರೆಗಳಿಗೆ ತಕ್ಷಣ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹಾನಗಲ್ ತಾಲೂಕು ಘಟಕದ ನೇತೃತ್ವದಲ್ಲಿ ಶುಕ್ರವಾರ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ಒಂದು ವಾರದಿಂದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವರದಾ ನದಿಯಲ್ಲಿ ನೀರಿನ ಹರಿವು ಕುಸಿಯುವ ಮುನ್ನವೇ ಕೆರೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ವರ್ಷ ಮಳೆ ಕೊರತೆಯ ಮುನ್ಸೂಚನೆ ಇದ್ದರೂ ನೀರಾವರಿ ಇಲಾಖೆ ಯಾವುದೇ ಪೂರ್ವಸಿದ್ಧತೆ ಕೈಗೊಂಡಿಲ್ಲ ಎಂದು ಆರೋಪಿಸಿದ ರೈತ ಮುಖಂಡರು, ರೈತರ ಹಿತದೃಷ್ಟಿಯಿಂದ ತಕ್ಷಣ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.




