ಬೆಂಗಳೂರು: ವಿಶ್ವ ಕ್ರಿಕೆಟ್‌ನ ರನ್ ಮಷಿನ್ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಸದ್ಯ ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದಾರೆ. ಅಂತರಾಷ್ಟ್ರೀಯ ಟಿ-20 ಮಾದರಿಗೆ ವಿಧಾಯ ಹೇಳಿರುವ ವಿರಾಟ್ ಸದ್ಯ ಕ್ರಿಕೆಟ್‌ನಿಂದ ತಾತ್ಕಾಲಿಕ ವಿಶ್ರಾಂತಿ ಪಡೆದಿದ್ದು, ಪತ್ನಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ಆದರೆ ವಿರಾಟ್ ಕೊಹ್ಲಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ಮೇಲೆ ಎಫ್ಐಆರ್ ದಾಖಲಾಗಿದೆ.
ಹೌದು, ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವಿರಾಟ್ ಕೊಹ್ಲಿಯವರ ಮಾಲೀಕತ್ವದ ‘ದ ಒನ್ 8 ಕಮ್ಯೂನ್ ಪಬ್’ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿಗದಿತ ಅವಧಿಗಿಂತ ಹೆಚ್ಚಿನ ಅವಧಿಯವರೆಗೆ ಪಬ್ ನಡೆಸುತ್ತಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಜು. 6ರಂದು ಕೊಹ್ಲಿಯವರ ಪಬ್, ರಾತ್ರಿ 1.20ರವರೆಗೂ ಕಾರ್ಯನಿರ್ವಹಿಸುತ್ತಿದ್ದು, ಅದು ನಿಯಮ ಬಾಹಿರವಾಗಿದೆ. ತಡರಾತ್ರಿ ಈ ಪ್ರದೇಶದಲ್ಲಿ ಜೋರಾಗಿ ಸಂಗೀತ ನುಡಿಸುತ್ತಿರುವ ಬಗ್ಗೆ ದೂರುಗಳು ಬಂದ ಬೆನ್ನಲ್ಲೇ ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೋಲಿಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ರೂ ಗ್ರಾಹಕರು ಇದ್ದದ್ದು ಕಂಡು, ಪಬ್ ಗರಿಷ್ಟ ಸಮಯಾವಧಿ ಮೀರಿ ತೆರೆದಿದ್ದ ಕಾರಣಕ್ಕೆ ಎಫ್ಐಆರ್ ದಾಖಲಿಸಿದ್ದಾರೆ. “ರಾತ್ರಿಯಲ್ಲಿ ಜೋರಾಗಿ ಸಂಗೀತವನ್ನು ನುಡಿಸುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿವೆ. ತನಿಖೆ ನಡೆಯುತ್ತಿದೆ ಮತ್ತು ಅದರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಈ ಒನ್ 8 ಕಮ್ಯೂನ್ ಪಬ್ ಬಗ್ಗೆ ಹೇಳುವುದಾದರೆ ಇದು ವಿರಾಟ್ ಒಡೆತನದಲ್ಲಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ 2019ರಲ್ಲಿಆರಂಭವಾಗಿರುವ ಪಬ್ ,ಕಸ್ತೂರ್ ಬಾ ರಸ್ತೆಯಲ್ಲಿರುವ ಬೃಹದಾಕಾರದ ಕಟ್ಟಡದ ಟೆರೆಸ್ ಮೇಲೆ ಸುಮಾರು 1,800 ಚದುರಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯದ್ವಾರ, ಮತ್ಯಾಲಯ ಹಾಗೂ ಎಂಜಿ ರಸ್ತೆಯ ಆರಂಭದಲ್ಲಿ ಇರುವ ಜಂಕ್ಷನ್ ನಲ್ಲಿರುವ ಟಾನಿಕ್ ಲಿಕ್ಕರ್ ಸ್ಟೋರ್ ಇರುವ ಕಟ್ಟಡದ ಮೇಲ್ಛಾವಣಿ ಮೇಲೆಯೇ ಈ ಪಬ್ ಇದೆ. ನೋಡಲು ಸುಂದರವಾಗಿ ಗಾಜಿನ ಮನೆಯಂತೆ ಕಾಣುವ ಈ ಪಬ್ ದಿನಕ್ಕೆ ನೂರಾರು ಗ್ರಾಹಕರನ್ನು ಸೆಳೆಯುತ್ತದೆ. ಬೆಂಗಳೂರಿನ ಅತ್ಯಾಧುನಿಕ ಜೀವನಶೈಲಿಗೆ ತಕ್ಕ ಹಾಗೆ ಈ ಪಬ್ ಅನ್ನು ರೂಪಿಸಲಾಗಿದ್ದು, ಈ ಪಬ್ ನೊಳಗಿನ ಒಂದು ಗೋಡೆಯ ಮೇಲೆ ಚಿನ್ನದ ಬಣ್ಣದ ಅಕ್ಷರಗಳಲ್ಲಿ ವಿರಾಟ್ ಕೊಹ್ಲಿಯ ಸಹಿ ಇರುವುದು ಇಲ್ಲಿನ ಪ್ರಮುಖವಾದ ಆಕರ್ಷಣೆಗಳಲ್ಲೊಂದು. ಪಬ್ ಗೆ ಬರುವ ಬಹಳಷ್ಟು ಜನರು ಈ ಸಹಿಯ ಬರಹದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ.
ಅಷ್ಟಕ್ಕೂ, ಒನ್ 8 ಕಮ್ಯೂನ್ ರೆಸ್ಟೋರೆಂಟ್ ಎಂಬುದು ಕೇವಲ ಬೆಂಗಳೂರಿನಲ್ಲಿ ಮಾತ್ರವಿಲ್ಲ. ಇದೊಂದು ಸರಣಿ ರೆಸ್ಟೋರೆಂಟ್ ಬ್ಯುಸಿನೆಸ್ ಆಗಿದ್ದು , ಸಂಸ್ಥೆಯ ಎಂಟನೇ ಔಟ್‌ಲೆಟ್ ಇದಾಗಿದೆ. ಇದೇ ಬ್ರ್ಯಾಂಡ್ ನಡಿಯಲ್ಲಿ ಕ್ಲಬ್ ಅಥವಾ ಪಬ್ ಗಳು ಮುಂಬೈ, ಪುಣೆ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ನೋಡಬಹುದಾಗಿದೆ. ಒನ್ 8 ಕಮ್ಯೂನ್ ಮಾತ್ರವಲ್ಲದೆ, ಕೊಹ್ಲಿಯವರು ನುಯೆವಾ ಎಂಬ ಮತ್ತೊಂದು ಬ್ರ್ಯಾಂಡ್ ಅಡಿಯಲ್ಲಿ ಸರಣಿ ರೆಸ್ಟೋರೆಂಟ್ ಗಳನ್ನು ಹೊಂದಿದ್ದಾರೆ. ನುಯೆವಾ ಹೆಸರಿನ ರೆಸ್ಟೋರೆಂಟ್ ಗಳು ದೆಹಲಿ, ಮುಂಬೈನಲ್ಲಿವೆ.
ಒಟ್ಟಾರೆಯಾಗಿ ವಿಶ್ವಕಪ್ ಗೆದ್ದ ಖುಷಿಯಲ್ಲಿ ಫಾರನ್ ಟ್ರಿಪ್ ನಲ್ಲಿದ್ದ ವಿರಾಟ್ ಗೆ ಬೆಂಗಳೂರು ಪೋಲಿಸರು ಶಾಕ್ ನೀಡಿದ್ದಾರೆ.