ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ರಂಬಾನ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯ ಹಿನ್ನೆಲೆಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದೆ. ಇನ್ನೂ ನಿರಂತರವಾಗಿ ಸರಿಯುತ್ತಿರುವ ಮಳೆಗೆ ಜಮ್ಮ ಮತ್ತು ಕಾಶ್ಮೀರದ 12ಕ್ಕೂ ಅಧಿಕ ಕಡೆಗಳ ಪ್ರದೇಶಗಳಲ್ಲಿ ಭೂಕುಸಿತವಾಗಿದೆ. ಅಲ್ಲದೆ ಬಿರುಗಾಳಿ, ಮಳೆ ಹಾಗೂ ಗುಡುಗು ಸಹಿತವಾಗಿ ಹೆಚ್ಚಿನ ರಭಸದಲ್ಲಿ ಮೇಘಸ್ಫೋಟವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಅಲ್ಲದೆ ಈ ಎಲ್ಲದರ ಪರಿಣಾಮವಾಗಿ ಹಲವಾರು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರಸ್ತೆಗಳು ಸಹ ಸಂಪೂರ್ಣವಾಗಿ ಹಾಳಾಗಿವೆ. ಇನ್ನೂ ಇಷ್ಟೇ ಅಲ್ಲದೆ ಈ ಘಟನೆಯ ಬಳಿಕ ಜಮ್ಮು ಪ್ರದೇಶದಾದ್ಯಂತ ಸುರಿಯುತ್ತಿರುವ ಮಳೆಗೆ ಸಂಭವಿಸಿದ್ದು, ಕಳೆದ 48 ಗಂಟೆಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಶನಿವಾರ ರಾತ್ರಿ, ರಿಯಾಸಿ ಜಿಲ್ಲೆಯ ಅರ್ನಾಸ್ ಪ್ರದೇಶದಲ್ಲಿ ಸಿಡಿಲು ಬಡಿದು ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಧರಮ್ ಕುಂಡ್ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, 40 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಹತ್ತು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಪದೇ ಪದೇ ಮೋಡ ಸಿಡಿದರೂ, ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡಗಳು 100 ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿವೆ. ಹಲವಾರು ವಾಹನಗಳು ಸಹ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಬಂದ್ ಆದ ಸಾರ್ವಕಾಲಿಕ ಮಾರ್ಗ..!
ರಂಬಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ, ಭೂಕುಸಿತ ಮತ್ತು ನಿರಂತರ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ವರದಿ ಮಾಡಿದ್ದಾರೆ. ಪರಿಹಾರ ಮತ್ತು ಹಾನಿಯ ಮೌಲ್ಯಮಾಪನ ಕಾರ್ಯಾಚರಣೆಗಳು ಮುಂದುವರೆದಿದ್ದು, ಮಾನವ ಜೀವಗಳನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ಈ ಹೆದ್ದಾರಿಯು ಈ ಪ್ರದೇಶದ ಅತ್ಯಂತ ಪ್ರಮುಖವಾದ ಸಾರ್ವಕಾಲಿಕ ಮಾರ್ಗವಾಗಿದೆ.
ವಿಶೇಷವಾಗಿ ನಶ್ರಿ-ಬನಿಹಾಲ್ ಪ್ರದೇಶದ ಬಳಿ ಭೂಕುಸಿತಗಳು, ಮಣ್ಣು ಮತ್ತು ಬಂಡೆಗಳು ಬೀಳುವುದರಿಂದ 250 ಕಿಲೋಮೀಟರ್ ಹೆದ್ದಾರಿಯ ಹೆಚ್ಚಿನ ಭಾಗಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಪಂಥಿಯಾಲ್ ಬಳಿಯ ರಸ್ತೆಯ ಒಂದು ಭಾಗವೂ ಕೊಚ್ಚಿಹೋಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಕುಸಿತದ ಪರಿಣಾಮ ಮನೆಗಳು, ಅಂಗಡಿಗಳು ಮತ್ತು ಹೆದ್ದಾರಿಯನ್ನು ಹಾನಿಗೊಳಪಟ್ಟಿವೆ. ರಂಬಾನ್ ಹೆದ್ದಾರಿಯಲ್ಲಿ ಹಲವಾರು ವಾಹನಗಳು ಹಾನಿಗೊಳಗಾಗಿದ್ದು, ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.
100ಕ್ಕೂ ಅಧಿಕ ಜನರ ರಕ್ಷಣೆ..
ಅಲ್ಲದೆ ಈ ಹಿಮಪಾತದಲ್ಲಿ ಸಿಲುಕಿಕೊಂಡಿರುವ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಮುಂದಿನ ಸೂಚನೆ ಬರುವವರೆಗೂ ಈ ಮಾರ್ಗದಲ್ಲಿ ಯಾವುದೇ ಅನಗತ್ಯ ಪ್ರಯಾಣ ಮಾಡದಂತೆ ಸಂಚಾರ ಇಲಾಖೆ ಎಚ್ಚರಿಕೆ ನೀಡಿದೆ. ತೆರವು ಕಾರ್ಯಾಚರಣೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಮತ್ತು ಶೀಘ್ರದಲ್ಲೇ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪ್ರಯಾಣಿಕರು ಅಧಿಕೃತ ಸಲಹೆಗಳ ಬಗ್ಗೆ ತಿಳಿದುಕೊಳ್ಳಲಿ, ಭೂಕುಸಿತ ಪೀಡಿತ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಲು ಮತ್ತು ಪರಿಸ್ಥಿತಿ ಸ್ಥಿರವಾಗುವವರೆಗೆ ಈ ಪ್ರದೇಶಕ್ಕೆ ಪ್ರವಾಸಗಳನ್ನು ಮುಂದೂಡಲು ಮನವಿ ಮಾಡಲಾಗಿದೆ. ಅಲ್ಲದೆ ರಂಬಾನ್ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ರಂಬಾನ್ ಎಸ್‌ಪಿ ಕುಲ್ಬೀರ್ ಸಿಂಗ್ ತಿಳಿಸಿದ್ದಾರೆ.
ಘಟನೆಯಿಂದ ದುಖಿಃತನಾಗಿದ್ದೇನೆ..
ಇನ್ನೂ ಘಟನೆಗೆ ಬೇಸರ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ರಂಬಾನ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ಮತ್ತು ಹಠಾತ್ ಪ್ರವಾಹದಿಂದ ತೀವ್ರ ದುಃಖಿತನಾಗಿದ್ದೇನೆ, ಇದು ಜೀವ ಮತ್ತು ಆಸ್ತಿಗೆ ಅಪಾರ ಹಾನಿಯನ್ನುಂಟುಮಾಡಿದೆ. ಅಗತ್ಯವಿರುವ ಕಡೆಗಳಲ್ಲಿ ತಕ್ಷಣದ ರಕ್ಷಣಾ ಪ್ರಯತ್ನಗಳನ್ನು ನಡೆಸಲು ನಾವು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾನು ಪರಿಹಾರ ಮತ್ತು ದುರಸ್ತಿ ಯೋಜನೆಗಳನ್ನು ಪರಿಶೀಲಿಸುತ್ತೇನೆ. ಸದ್ಯಕ್ಕೆ, ಭೂಮಿಯ ಪರಿಸ್ಥಿತಿಯ ಕಡೆ ಗಮನ ಹರಿಸಲಾಗಿದೆ. ಈಗಾಗಲೇ ಭೂಕುಸಿತ ಹಾಗೂ ಜೀವ ಹಾನಿಯ ಹಿನ್ನೆಲೆ ನಿರ್ಬಂಧಿತ ಸ್ಥಳಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ತ್ವರಿತವಾಗಿ ರಕ್ಷಣಾ ಕಾರ್ಯವನ್ನು ನಡೆಸುವ ಮೂಲಕ ಹಾನಿಯನ್ನು ತಪ್ಪಿಸಿರುವ ಅಧಿಕಾರಿಗಳ ಹಾಗೂ ಪೊಲೀಸರ ಕಾರ್ಯವನ್ನು ಒಮರ್ ಅಭಿನಂದಿಸಿದ್ದಾರೆ.