ರಾಜ್ಯದ ಜನರಿಗೆ ಜಲ ದಿಗ್ಬಂಧನ, ಅದರಲ್ಲೂ ಉತ್ತರ ಕರ್ನಾಟಕದ ಸ್ಥಿತಿಯಂತೂ ಕರುಣಾಜನಕವಾಗಿದೆ. ಎಲ್ಲಿ ನೋಡಿದ್ರೂ ನೀರು. ಜೀವ ನದಿಗಳ ರೌದ್ರಾವತಾರಕ್ಕೆ ರಾಜ್ಯಕ್ಕೆ ರಾಜ್ಯವೆ ಬೆಚ್ಚಿ ಬಿದ್ದಿದೆ. ಲೆಕ್ಕವಿಲ್ಲದಷ್ಟು ಮಂದಿ ಸರ್ವಸ್ವವನ್ನೂ ಕಳೆದುಕೊಂಡಿದ್ದು ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಪ್ರವಾಹಕ್ಕೆ ಸಿಲುಕಿರುವ ಎಲ್ಲಾ ಜಿಲ್ಲೆಗಳಲ್ಲೂ ಜನರು ಪರಿಸ್ಥಿತಿ ಒಂದೇ ಆಗಿದೆ. ಹಸಿವು ನೀರಾಡಿಕೆಯಿಂದ ಜನರು ಕಂಗಾಲಾಗಿದ್ದಾರೆ.
ಸಾವಿರಕ್ಕೂ ಹೆಚ್ಚು ಗ್ರಾಮಗಳು ತೀವ್ರ ರೂಪದ ಪ್ರವಾಹಕ್ಕೆ ತುತ್ತಾಗಿದ್ದು, ಐದು ಸಾವಿರಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಇದುವರೆಗೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದ್ದು, 339 ಶಿಬಿರಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಪ್ರವಾಹದ ರೌದ್ರ ನರ್ತನ ಕ್ಕೆ ಇದುವರೆಗೂ ಸುಮಾರು 4 ಸಾವಿರ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.
ಮೂಲಗಳ ಪ್ರಕಾರ 2 ಲಕ್ಷ, 56 ಸಾವಿರದ 594 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿದೆ. ಸದ್ಯ ಬೀಕರ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳ ಜನರ ಸಹಾಯಕ್ಕೆ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚುವಂತೆ ಸಾರ್ವಜನಿಕರಲ್ಲಿ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಮಾನವೀಯ ನೆಲಗಟ್ಟಿನ ಮೇಲೆ ಸರ್ಕಾರದೊಂದಿಗೆ ಕೈಜೋಡಿಸಲು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕೆಂದು ಮಾನವಿ ಮಾಡಲಾಗಿದೆ.
ಇನ್ನೂ ಪ್ರವಾಹ ಸಂತ್ರಸ್ತರ ನೆರವಿಗಾಗಿ ದೇಣಿಗೆ ಸಲ್ಲಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ವಿಧಾನಸೌಧ ಶಾಖೆಯ ಮುಖ್ಯಮಂತ್ರಿ ಪರಿಹಾರ ನಿಧಿ “ಖಾತೆ ಸಂಖ್ಯೆ-37887098605” ಈ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಬಹುದಾಗಿದೆ. ಇನ್ನೂ ಚೆಕ್ ಮತ್ತು ಡಿಡಿ ಮೂಲಕವೂ ದೇಣಿಗೆಯನ್ನು ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80ಜಿ(2) ರ ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ. ಇನ್ನೂ ಆದಾಯ ತೆರಿಗೆ ವಿನಾಯಿತಿ ಪಡೆಯಲು PAN NO-AAAGC1692P ಅಥವಾ GGGGG0000G ಅನ್ನು ಬಳಸಬಹುದಾಗಿದೆ.