ಅಂದವಾಗಿರುವ, ಕ್ಲೀನ್ ಆಗಿರುವ ಮುಖದ ಮೇಲೆ ಚಿಕ್ಕ ಗುಳ್ಳೆ, ಅಥವಾ ಮೊಡವೆ ಬಂದ್ರೆ ಎಷ್ಟು ಇರಿಟೇಟ್ ಆಗತ್ತೆ ಅಂತಾ, ಈಗಷ್ಟೇ 10ನೇ ತರಗತಿಗೆ ಸೇರಿದವರನ್ನ ಕೇಳಿ. ಯಾಕಂದ್ರೆ ಈ ಮೊಡವೆಗಳ ಕಾಟ ಹೆಚ್ಚಾಗಿ ಕಾಡುವುದು ಈ ಯುವಕ-ಯುವತಿಯರಿಗೆ. ಅಲ್ಲದೇ, ಗರ್ಭ ಧರಿಸಿದ ಹೊಸತರಲ್ಲೂ ಈ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಮೊಡವೆ ಕಲೆ ಉಳಿಯದಂತೆ ಏನು ಮಾಡಬೇಕು. ಮುಖ ಸುಂದರವಾಗಿ, ಕಾಂತಿಯುತವಾಗಿ ಕಾಣಲು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ಬೆಳಿಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಒಂದು ಕಿತ್ತಳೆ ಹಣ್ಣನ್ನು ತಿನ್ನಿ. ಕೊಂಚ ಹೊತ್ತು ಬಿಟ್ಟು ತಿಂಡಿ ತಿನ್ನಿ. ತಿಂಡಿ ಊಟದಲ್ಲಿ ಹೆಚ್ಚು ಎಣ್ಣೆ ಪದಾರ್ಥ, ಬೇಕರಿ ತಿಂಡಿ, ಮಾಂಸಾಹಾರ ಸೇವನೆ ಬೇಡ. ಇನ್ನು ಯಾವಾಗಲೂ ಹೇಳುವಂತೆ ಹೆಚ್ಚು ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದ ಜೊತೆ, ನಿಮ್ಮ ತ್ವಚೆ ಕೂಡ ಕ್ಲೀನ್ ಆಗುತ್ತದೆ.
ಇದರ ಜೊತೆಗೆ ಮುಖವನ್ನ ಸ್ವಚ್ಛವಾಗಿ ತೊಳೆದುಕೊಂಡು, ಅದಾಗೇ ಆರಲು ಬಿಡಿ. ಮುಖ ನೀರನ್ನು ಹೀರಿಕೊಂಡ ಬಳಿಕ, ಆ್ಯಲೋವೆರಾ ಜೆಲ್‌ನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದು ಒಣಗಿದ ಬಳಿಕ, ರೋಸ್ ವಾಟರ್‌ನ್ನು ಮುಖಕ್ಕೆ ಸಿಂಪಡಿಸಿಕೊಳ್ಳಿ. ನಂತರ 15 ನಿಮಿಷದ ಬಳಿಕ ಮುಖವನ್ನು ತೊಳೆಯಿರಿ. ಮುಖ ತೊಳೆಯುವಾಗ, ಸಾಬೂನು ಬಳಸಬೇಡಿ. ಮುಲ್ತಾನಿ ಮಿಟ್ಟಿ ಬಳಸಿ.
ಎರಡು ವಾರಕ್ಕೊಮ್ಮೆ ಅಥವಾ ತಿಂಗಳಲ್ಲಿ ಮೂರು ಸಲ, ಶ್ರೀಗಂಧವನ್ನು ಹಾಲಿನ ಜೊತೆ ತೇಯ್ದು, ಫೇಸ್ ಪ್ಯಾಕ್ ಹಾಕಿ. ಇದಕ್ಕೂ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಂಡು, ಸ್ಟೀಮ್ ತೆಗೆದುಕೊಳ್ಳಿ. ನಂತರ ಫೇಸ್‌ಪ್ಯಾಕ್ ಹಾಕಿ. ವಾರದಲ್ಲಿ ಎರಡರಿಂದ ಮೂರು ಬಾರಿ ಐಸ್ ಕ್ಯೂಬ್ಸ್‌ನಿಂದ ಮುಖವನ್ನು 3 ನಿಮಿಷ ಮಸಾಜ್ ಮಾಡಿ.