ಬೆಳಗಾವಿ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ವಾಕ್ಸಮರ ಜೋರಾಗಿದೆ. ನಾವು ಯಾವುದೋ ಒಂದು ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ್ ಸವದಿಗೆ ಹೆಚ್ಚಿನ ಲಾಭವಾಯ್ತು. ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ, ಬಿಜೆಪಿಯಿಂದ ಪೀಡೆ ಹೋಗಿ ಕಾಂಗ್ರೆಸ್ ಪಾಲಾಗಿದೆ ಎಂದು, ರಮೇಶ್ ಜಾರಕಿಹೊಳಿ ಕುಟಿಕಿದ್ದಾರೆ.
ಅಥಣಿ ಪಟ್ಟಣದಲ್ಲಿ ರಮೇಶ್ ಜಾರಕಿಹೊಳಿ ಮಾತನಾಡಿದ್ದು, ಕಾಂಗ್ರೆಸ್‌ನಲ್ಲಿ 5 ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಆದರೆ, ಬಿಜೆಪಿ ಬಿಟ್ಟು ಸವದಿ ತನ್ನ ವ್ಯಕ್ತಿತ್ವ ಹಾಳು ಮಾಡಿಕೊಂಡ. ಬಿಜೆಪಿ ಬಿಟ್ಟಿದ್ದು ಒಳ್ಳೆಯದಾಯ್ತು. ಇನ್ನು ಮುಂದೆ ಸವದಿ ಬಿಜೆಪಿ ಬರೋದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಬಿಜೆಪಿಯಲ್ಲೇ ಸವದಿ ಇದ್ದಿದ್ರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ.
ಶಾಸಕ ಲಕ್ಷ್ಮಣ್ ಸವದಿ ಬಿಜೆಪಿಗೆ ಮರಳಿ ಬರುವುದು ಅಷ್ಟೇನೂ ಸಲೀಸಲ್ಲ. ಮೊದಲಿಗಿಂತಲೂ ನಾವೀಗ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದೇವೆ. ಸವದಿ ಬಿಜೆಪಿಗೆ ಬರುವುದಾದರೆ ಅವನನ್ನು ಎಲ್ಲಿ ತಡೆಯಬೇಕೋ ಅಲ್ಲೇ ತಡೆಯುತ್ತೇವೆ. ಆ ಶಕ್ತಿ ನಮ್ಮಲ್ಲಿದೆ, ಇದನ್ನು ಮೀರಿ ಅವನು ಏನಾದರೂ ಪಕ್ಷಕ್ಕೆ ಬಂದ್ರೆ, ಮುಂದೆ ದೇವರಿದ್ದಾನೆ ನೋಡೋಣ.
ಅಥಣಿಯಲ್ಲಿ ಕುಳಿತು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುತ್ತಾನೆ. ಆದರೆ ಅವಕಾಶ ಸಿಕ್ಕರೆ ಜಿಗಿದು ಬರುತ್ತಾರೆ. ಅವಕಾಶ ಸಿಕ್ಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗೋಕೂ ಸವದಿ ಹಿಂದೆ ಸರಿಯುವುದಿಲ್ಲ. ಬಿಡಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದರೆ ಜಾರಕಿಹೊಳಿ ಮನೆಗೆ ಬಂದು ಕಾಲಿಗೆ ಬಿದ್ದು ಇಲ್ಲೇ ಕೋರುತ್ತಾನೆಂದು, ರಮೇಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.