IPL ಫೈನಲ್ ಮೇಲೆ ಬಿತ್ತು ‘ಉಚಿತ’ ರಾಜಕಾರಣದ ಕರಿನೆರಳು! RCB ಅಭಿಮಾನಿಗಳ ಕನಸಿಗೆ ಕನ್ನ?

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯದ ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದಿಂದ ಕೇಳಿಬಂದ ಭಾರೀ ಪ್ರಮಾಣದ ಉಚಿತ ಟಿಕೆಟ್ ಬೇಡಿಕೆಯ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿಯ ಪ್ರಕಾರ, ಸುಮಾರು 10 ಸಾವಿರ ವಿವಿಐಪಿ ಟಿಕೆಟ್‌ಗಳನ್ನು ಸರ್ಕಾರದ ಪರವಾಗಿ ಕೇಳಲಾಗಿದೆ ಎನ್ನಲಾಗಿದೆ, ಈ ಬೇಡಿಕೆ ಪಂದ್ಯ ಆಯೋಜನೆಗೆ ಅಡಚಣೆಯಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಶಾಸಕರು ಹಾಗೂ ವಿವಿಧ ಇಲಾಖೆಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಪಾಸ್‌ಗಳನ್ನು ಒದಗಿಸುವಂತೆ ಒತ್ತಾಯಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆಯಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ವ್ಯಕ್ತವಾಗಿದೆ. ವಿಶೇಷವಾಗಿ ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದು, ಸಾಮಾನ್ಯ ಅಭಿಮಾನಿಗಳಿಗೆ ಸಿಗಬೇಕಾದ ಅವಕಾಶವನ್ನು ವಿವಿಐಪಿ ಸಂಸ್ಕೃತಿ ಕಸಿದುಕೊಂಡಿದೆ ಎಂದು ಟೀಕಿಸುತ್ತಿದ್ದಾರೆ.

ಇನ್ನೊಂದೆಡೆ, ಈ ವಿಚಾರ ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರ ಹಾಗೂ ಬಿಸಿಸಿಐ ಕರ್ನಾಟಕದ ವಿರುದ್ಧ ಅನ್ಯಾಯ ಮಾಡಿವೆ ಎಂದು ಆರೋಪಿಸಿದ್ದಾರೆ. ಗುಜರಾತ್‌ಗೆ ಪಂದ್ಯ ಸ್ಥಳಾಂತರ ಮಾಡಿರುವುದರ ಹಿಂದೆ ರಾಜಕೀಯ ಪ್ರಭಾವ ಇರಬಹುದು ಎಂಬ ಅನುಮಾನವೂ ಕೂಡ ವ್ಯಕ್ತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಆಯೋಜನೆ ಆಗದಿರುವುದು ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದ್ದು, ಇದೀಗ ಉಚಿತ ಟಿಕೆಟ್ ರಾಜಕಾರಣವೇ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸೃಷ್ಟಿಸಿದೆ.

About The Author