Dharwad News: ಧಾರವಾಡ: ಜಿಲ್ಲೆಯ ಶ್ರೀಸಾಮಾನ್ಯರನ್ನು ಭೇಟಿ ಮಾಡಿ, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮುಂಚೂಣಿಯಲ್ಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರ ಪೈಕಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಸದಾ ಜನರೊಂದಿಗೆ ಬೆರೆಯುವ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಪರಿಹಾರ ಒದಗಿಸುತ್ತಿದ್ದಾರೆ. ಜನತಾ ದರ್ಶನದ ಮೂಲಕ ಅಹವಾಲು ಸ್ವೀಕರಿಸಿ, ಪರಿಹರಿಸುವ ಕಾರ್ಯದಲ್ಲಿ ಸದಾ ನಿರತರಾಗಿದ್ದಾರೆ.
ಮುಖ್ಯಮಂತ್ರಿಯವರ ಸೂಚನೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವರು, ಜನತಾ ದರ್ಶನ ಮಾಡಿಸುವ ಉತ್ತಮ ಯೋಜನೆಗೆ ಸೆಪ್ಟೆಂಬರ್ 25 ರಂದು ಚಾಲನೆ ನೀಡಲಾಗಿತ್ತು. ಅಂದು ಕೂಡ ಸಚಿವ ಸಂತೋಷ್ ಲಾಡ್ ಅವರು ಧಾರವಾಡ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಜನತಾ ದರ್ಶನ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದರು. ಕೆಲವೊಂದು ಮನವಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದರು.
ಸೆಪ್ಟೆಂಬರ್ 25 ಮತ್ತು ನವೆಂಬರ್ 6 ರಂದು ಎರಡು ಬಾರಿ ಬೃಹತ್ ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಸಿ ಯಶಸ್ವಿಯಾಗಿದ್ದಾರೆ. ಜನತಾ ದರ್ಶನದಲ್ಲಿ ಸ್ವೀಕರಿಸಿದ್ದ ಸಾರ್ವಜನಿಕರ ಅಹವಾಲುಗಳಲ್ಲಿ ಶೇ 90ರಷ್ಟು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅಧಿಕಾರಿಗಳಿಂದ ವಿಲೇವಾರಿ ಮಾಡಿಸಿದ್ದಾರೆ.
ಸೆ.25 ರ ಪ್ರಥಮ ಜನತಾ ದರ್ಶನ; ಶೇ 90ರಷ್ಟು ಅರ್ಜಿ ವಿಲೇವಾರಿ
ಮೊದಲ ಅಂದರೆ ಸೆ.25 ರಂದು ನಡೆದ ಪ್ರಥಮ ಜನತಾ ದರ್ಶನದಲ್ಲಿ ಜಿಲ್ಲೆಯ ಸುಮಾರು 2,000 ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕೆಲವರು ತಮ್ಮ ವೈಯಕ್ತಿಕ, ಇನ್ನು ಕೆಲವರು ಸಮುದಾಯ, ಗ್ರಾಮದ ಸಮಸ್ಯೆ, ದೂರುಗಳನ್ನು ಸಲ್ಲಿಸಿದ್ದರು. ಒಟ್ಟಾರೆ ವಿವಿಧ ಇಲಾಖೆ, ನಿಗಮ ಮಂಡಳಿಗಳಿಗೆ ಸಂಬಂಧಿಸಿದ 450 ಅರ್ಜಿಗಳನ್ನು ಜನತಾ ದರ್ಶನದಲ್ಲಿ ಸ್ವೀಕರಿಸಲಾಗಿತ್ತು.
ಇವುಗಳ ಪೈಕಿ 374 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಪರಿಹರಿಸಲಾಗಿದೆ. ಉಳಿದಂತೆ ಪರಿಹಾರಕ್ಕೆ ಬಾಕಿ ಇರುವ 76 ಅರ್ಜಿಗಳು ಲೋಕೋಪಯೋಗಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವಸತಿ ಇಲಾಖೆಗಳಲ್ಲಿ ನಿಯಮಾನುಸಾರ ಪರಿಶೀಲಿಸಿ, ಇತ್ಯರ್ಥಗೊಳಿಸಲು ಬಾಕಿ ಇವೆ. ಈ ಅರ್ಜಿಗಳನ್ನು ಸಹ ಕ್ರಮ ಜರುಗಿಸಿ, ಇತ್ಯರ್ಥಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸಚಿವ ಸಂತೋಷ್ ಲಾಡ್ ಅವರು ನಿರ್ದೇಶಿಸಿದ್ದಾರೆ.
ಎರಡನೇ ಜನತಾ ದರ್ಶನದಲ್ಲಿ ಮನವಿಗಳ ಮಹಾಪೂರ:
ಇನ್ನು ನ.6ರಂದು ನಡೆದ ಎರಡನೇ ಜಿಲ್ಲಾ ಜನತಾ ದರ್ಶನಕ್ಕೆ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳ ವಿವಿಧ ಗ್ರಾಮ ಹಾಗೂ ಪಟ್ಟಣಗಳಿಂದ ಜನರು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸೌಕರ್ಯಗಳಿಗೆ ಸಂಬಂಧಿಸಿದ ಅಹವಾಲು, ಮನವಿ ಹೊತ್ತು ತಂದಿದ್ದರು. ಸಾವಧಾನದಿಂದ ಪ್ರತಿ ಅರ್ಜಿಗಳನ್ನು ಸ್ವೀಕರಿಸಿದ ಸಚಿವರು, 197 ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಿದ್ದರು.
“ಸಾರ್ವಜನಿಕರಿಗೆ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಅವರಲ್ಲಿ ರಾಜ್ಯ ಸರಕಾರದ ಸೌಲಭ್ಯಗಳ ಅರಿವು ಮೂಡಿಸಿ, ಯೋಜನೆಗಳನ್ನು ತಲುಪಿಸಲು ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಮಹತ್ವದ ಮಾಧ್ಯಮವಾಗಿದೆ” ಅವರೇ ಹೇಳಿದ್ದಾರೆ. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಕೂಡ.
ಈವರೆಗೂ ಸಾಕಷ್ಟು ಬಾರಿ ಸಾರ್ವಜನಿಕ ಸಂಪರ್ಕ
ಸಚಿವರು ತಮ್ಮ ಸ್ವಕ್ಷೇತ್ರ ಕಲಘಟಗಿ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೂ ಸಾಕಷ್ಟು ಬಾರಿ ಸಾರ್ವಜನಿಕರನ್ನು ಭೇಟಿ ಮಾಡಿದ್ದಾರೆ. ಅವರ ದುಃಖ ದುಮ್ಮಾನಗಳನ್ನು ಆಲಿಸಿದ್ದಾರೆ. ಕೆಲವೊಂದು ಕಡೆಗಳಲ್ಲಿ ಸಂಕಷ್ಟಕ್ಕೀಡಾದವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ. ಹೆಚ್ಚಾಗಿ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ನಿರ್ಗತಿಕರಿಗೆ ನೆರವಾಗಿದ್ದಾರೆ.
ʻಹೋದಲೆಲ್ಲ ಜನರಿಂದ ಅದ್ಭುತ ರೆಸ್ಪಾನ್ಸ್ʼ
ಇನ್ನು ಸಚಿವ ಸಂತೋಷ್ ಲಾಡ್ ಅವರ ಕಾರ್ಯವರೆಸೆ ಹೇಗೆಂದರೆ, ಸದಾ ಜನರೊಂದಿಗೆ ಬೆರೆಯುವುದು. ಅವರ ಸಮಸ್ಯೆಗಳನ್ನು ಅಲಿಸುವುದು. ಮುಖ್ಯಮಂತ್ರಿಯವರ ಸೂಚನೆಗಿಂತಲೂ ಮೊದಲೇ ಇವರು ಜಿಲ್ಲಾ, ತಾಲ್ಲೂಕು ಕೇಂದ್ರಗಳು ಮಾತ್ರವಲ್ಲ ಗ್ರಾಮ ಮಟ್ಟಗಳಲ್ಲೂ ಜನತಾ ದರ್ಶನ ನಡೆಸಿದ್ದು ದಾಖಲಾಗಿದೆ. ಅಷ್ಟೇ ಅಲ್ಲ, ಖುದ್ದು ಸಚಿವರೇ ಜನರ ಮನೆ ಬಾಗಿಲಿಗೆ ತೆರಳಿ, ಸಮಸ್ಯೆಗಳ ಅಲಿಸುವ ಕೆಲಸವನ್ನು ಮಾಡಿದ್ದಾರೆ.
ಮತ್ತೆ, ಸಚಿವರು ಭಾಗಿಯಾಗುವ ಯಾವುದೇ ಸಭೆ, ಸಮಾರಂಭ ಇರಲಿ ಆರಂಭಕ್ಕೂ ಮುನ್ನ ಅಥವಾ ನಂತರದಲ್ಲಿ ಜನರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಅಲಿಸುವ ಪರಿಪಾಠವನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ವಿಶೇಷವಾಗಿ ಸಚಿವರು, ಜಿಲ್ಲಾ ಪ್ರವಾಸದ ಪ್ರತಿ ಸಂದರ್ಭದಲ್ಲೂ ಧಾರವಾಡದ ಸರ್ಕಿಟ್ ಹೌಸ್‌ನಲ್ಲಿ ಜನತಾ ದರ್ಶನವನ್ನು ನಡೆಸುವುದು, ಜನರನ್ನು ಭೇಟಿಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.
ಕಾಂಗ್ರೆಸ್ ಕಚೇರಿಗೂ ಭೇಟಿ; ಕಾರ್ಯಕರ್ತರೊಂದಿಗೆ ಸಂವಾದ
ಉಸ್ತುವಾರಿಯಲ್ಲದ ಜಿಲ್ಲೆಗಳಲ್ಲಿ ಪ್ರವಾಸದ ಸಂದರ್ಭದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸುವುದು, ಉದ್ಯಮಿಗಳು ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸುವುದು ಮಾಮೂಲು. ಮತ್ತೆ, ಅಲ್ಲೇ ಕಾರ್ಮಿಕರ ಬವಣೆಗಳನ್ನು ಅಲಿಸುವುದನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಸಮಸ್ಯೆ ಬಾಧಿತ ಕುಟುಂಬಗಳನ್ನು ಭೇಟಿ ಮಾಡಿ ಸಂತೈಯಿಸುವುದು, ಜೊತೆಗೆ ಕಾಂಗ್ರೆಸ್ ಕಚೇರಿಗೂ ತೆರಳಿ, ಕಾರ್ಯಕರ್ತರೊಂದಿಗೆ ಚರ್ಚಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ.
ವಿಶೇಷವಾಗಿ ಸಚಿವ ಸಂತೋಷ್ ಲಾಡ್ ಅವರು ಬರೀ ಮನವಿ, ಅಹವಾಲುಗಳನ್ನು ಸ್ವೀಕರಿಸುವುದಷ್ಟೇ ಕೆಲಸ ಮಾಡುವುದಿಲ್ಲ. ಆ ಅರ್ಜಿಗಳತ್ತ ಬೆನ್ನತ್ತಿ ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿ ಪರಿಹರಿಸುವ ಕಾರ್ಯ ಮಾಡುತ್ತಿದ್ದಾರೆ.
ಈವರೆಗೆ ಸರ್ಕಾರದ ನಡೆ ಸಚಿವರ ಕಾರ್ಯಕ್ರಮ, ಪ್ರವಾಸ, ಜನತಾ ದರ್ಶನಗಳನ್ನು ಅವಲೋಕಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದ ಸಹದ್ಯೋಗಿಗಳ ಪೈಕಿ ಸಚಿವ ಸಂತೋಷ್ ಲಾಡ್ ಅವರೇ ಅಗ್ರಪಂಕ್ತಿಯಲ್ಲಿದ್ದಾರೆ. ಈಗಾಗಲೇ ಶ್ರೀಸಾಮಾನ್ಯರಿಂದಲೇ ಸಚಿವರು ʻಕಾಮನ್ ಮ್ಯಾನ್ʼ ಎಂದು ಬಿಂಬಿತವಾಗಿದ್ದಾರೆ. ಅಧಿಕಾರಿ ವರ್ಗದಿಂದಲೂ ಅವರಿಗೆ ಮೆಚ್ಚುಗೆ ಇದೆ.
ಒಟ್ಟಿನಲ್ಲಿ ಸಚಿವ ಸಂತೋಷ್ ಲಾಡ್ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ, ಅವರ ಸಮಸ್ಯೆ ಆಲಿಸಿ ಪರಿಹರಿಸುವ ಜನಸಾಮಾನ್ಯರ ಸಚಿವ ಎಂದೇ ಹೆಸರು ಸಂಪಾದಿಸುತ್ತಿರುವುದು ಜಿಲ್ಲೆಯ ಜನರನ್ನು, ರಾಜ್ಯದ ಜನರನ್ನು ಖುಷಿ ಪಡಿಸಿದೆ.
‘ಲೂಟಿ ಮಾಡುವವರಿಗೆ ಕೊಳ್ಳೆ ಹೊಡೆಯುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ’
‘ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್’