Monday, October 20, 2025

Latest Posts

ಬಿಹಾರ ಚುನಾವಣೆಗೆ ಫಂಡಿಂಗ್ : ಸಚಿವರಿಂದ ಹಣ ವಸೂಲಿ?

- Advertisement -

ಬಿಹಾರ ಚುನಾವಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರದ ಸಚಿವರು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಮಾಡಿದ್ದಾರೆ. ಸಚಿವರು ಬಿಹಾರ ಚುನಾವಣೆಗೆ ಫಂಡ್ ಕಳುಹಿಸಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಕಣ್ಣೀರು ಹಾಕಿಕೊಂಡು ನಮ್ಮ ಮುಂದೆ ಈ ವಿಷಯ ಹೇಳುತ್ತಿದ್ದಾರೆ. ವರ್ಗಾವಣೆ ದಂಧೆ ಮುಗಿದಿದೆ. ಈಗ ‘ರಿನಿವಲ್’ ಹೆಸರಿನಲ್ಲಿ ಎಲ್ಲಾ ಇಲಾಖೆಯ ಮಂತ್ರಿಗಳು ವಸೂಲಿ ಮಾಡಿ ಬಿಹಾರ ಚುನಾವಣೆಗೆ ಹಣ ಸಂಗ್ರಹಿಸುತ್ತಿದ್ದಾರೆ. ಆದರೆ ಆ ಹಣ ಬಿಹಾರಕ್ಕೆ ತಲುಪುವುದಿಲ್ಲ, ಅದು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ ಎಂದು ಅವರು ಟೀಕಿಸಿದರು.

ಚಿತ್ತಾಪುರ ಘಟನೆಯ ಕುರಿತು ಮಾತನಾಡಿದ ಅವರು, ಶಾಸಕ ಗುತ್ತೇದಾರ್ ಅವರು ದೀಪಾವಳಿ ಪ್ರಯುಕ್ತ ಕಚೇರಿ ಸ್ವಚ್ಛಗೊಳಿಸುವ ಕೆಲಸ ನಡೆದಿದ್ದು, ಯಾವುದೇ ದುರುದ್ದೇಶ ಇರಲಿಲ್ಲ ಎಂದಿದ್ದಾರೆ. ಆದರೆ ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆಗಳು ನಡೆಯುತ್ತಿವೆ. ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತ್ತಿರುವಾಗ, ಅದಕ್ಕೆ ಪೂರಕ ದಾಖಲೆ ಹುಡುಕಲು ಹೈಕಮಾಂಡ್ ಹೇಳಿದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಆರು ತಿಂಗಳಿಂದ ಸಂಬಳ ಸಿಗದೆ ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಒತ್ತಡದಿಂದ ಸರ್ವೆಗೆ ಹೋದ ಹೆಣ್ಣುಮಗಳು ಬಾವಿಗೆ ಹಾರಿದ್ದಾರೆ. ಪೊಲೀಸರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ನೈತಿಕತೆ ನೀಡಲು ಸರ್ಕಾರ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಆರ್‌ಎಸ್‌ಎಸ್ ವಿರುದ್ಧದ ಕಾಂಗ್ರೆಸ್ ಕ್ರಮಗಳ ಕುರಿತು ಮಾತನಾಡಿದ ರಾಘವೇಂದ್ರ, “ಕಾಂಗ್ರೆಸ್ ಈಗ ಆರ್‌ಎಸ್‌ಎಸ್‌ಗೆ ನಿರ್ಬಂಧ ಹೇರುವ ಕೆಲಸ ಮಾಡುತ್ತಿದೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಆಸ್ತಿಗಳ ಪರಿಶೀಲನೆ ನಡೆಯುತ್ತಿದೆ. ಇದು ಕಾಂಗ್ರೆಸ್‌ನ ಅಧಃಪತನಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು. ಜೊತೆಗೆ, ಪ್ರಿಯಾಂಕ್ ಖರ್ಗೆ ಹಾಗೂ ಹರಿಪ್ರಸಾದ್‌ರ ವಿರುದ್ಧ ಕಿಡಿಕಾರುತ್ತಾ, ಪ್ರಿಯಾಂಕ್ ತಮ್ಮ ಸ್ಥಾನ ಉಳಿಸಿಕೊಳ್ಳಲು, ಹರಿಪ್ರಸಾದ್ ಮಂತ್ರಿ ಸ್ಥಾನಕ್ಕಾಗಿ ಹೈಕಮಾಂಡ್ ಮೆಚ್ಚುಗೆ ಪಡೆಯಲು ಹೀಗೆ ಮಾತನಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೆಂಕಿ ಹಚ್ಚಿದವರ ವಿರುದ್ಧದ ಪ್ರಕರಣಗಳನ್ನು ರದ್ದು ಮಾಡುವವರನ್ನು ನಾವು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss