ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಹೊಸ ಸತ್ಯಗಳು ಬೆಳಕಿಗೆ ಬಂದಿವೆ. ಪತಿಯನ್ನೇ ನಂಬಿದ್ದ ಕೃತಿಕಾಗೆ ಅರಿವಾಗದಂತೆ, ಪತಿ ಡಾಕ್ಟರ್ ಮಹೇಂದ್ರ ರೆಡ್ಡಿ ವಂಚನೆ ಮಾಡಿ ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ವಿಷಯ ಬೆಳಕಿಗೆ ಬಂದಿದೆ. ಮಾರಥಹಳ್ಳಿ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಗಳು ಹೊರಬಿದ್ದಿದ್ದು, ಆರೋಪಿಯಿಂದ ಸತ್ಯ ಬಾಯ್ಬಿಡಿಸಲು ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆಯಲ್ಲಿ ಮಹೇಂದ್ರ ರೆಡ್ಡಿ Propofol ಎಂಬ ಅನಸ್ತೇಶಿಯಾ ಡ್ರಗ್‌ನ್ನು ಸ್ವತಃ ಖರೀದಿಸಿದ್ದಾನೆಂಬುದು ಬಹಿರಂಗವಾಗಿದೆ. ಮೆಡಿಕಲ್ ಶಾಪ್‌ನಲ್ಲಿ ಆ ಔಷಧಿ ಕೇಳಿದಾಗ, ಸಿಬ್ಬಂದಿ ಅದನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲವೆಂದು ಹೇಳಿದ್ದರೂ, ನಾನೊಬ್ಬ ಸರ್ಜನ್ ಎಂದು ಹೇಳಿ ಪ್ರಿಸ್ಕ್ರಿಪ್ಷನ್ ಬರೆದು ಕೊಟ್ಟಿದ್ದಾನೆ. ರೋಗಿಗೆ ಚಿಕಿತ್ಸೆ ನೀಡಬೇಕಿದೆ ಎಂದು ಸುಳ್ಳು ಹೇಳಿ Propofol ಪಡೆದುಕೊಂಡಿದ್ದಾನೆ. ಈ ಕುರಿತು ಪೊಲೀಸರು ಖಚಿತ ಸಾಕ್ಷಿಗಳನ್ನು ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೆಯಲ್ಲಿ ನೋವಿನಿಂದ ಬಳಲುತ್ತಿದ್ದ ಕೃತಿಕಾಗೆ ಮಹೇಂದ್ರ ರಾತ್ರಿ ವೇಳೆ ಐವಿ ಮೂಲಕ Propofol ನೀಡಿದ್ದಾನೆ. ಇಂಜೆಕ್ಷನ್ ಪರಿಣಾಮದಿಂದ ಕೃತಿಕಾ ನಿದ್ರೆಗೆ ಜಾರಿದ್ದು, ನಂತರ ಕೋಮಾಗೆ ತಲುಪಿದ್ದಾಳೆ. ಕೋಮಾದಿಂದ ಹೊರತರಲು ಅಗತ್ಯವಾದ ಔಷಧಿ ನೀಡದ ಕಾರಣ ಆಕೆ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ. ರಾತ್ರಿ ವೇಳೆ ಕೃತಿಕಾ ಜೊತೆ ಅದೇ ಕೋಣೆಯಲ್ಲಿ ಮಹೇಂದ್ರ ಮಲಗಿದ್ದನೆಂಬ ಮಾಹಿತಿ ಸಹ ಹೊರಬಿದ್ದಿದೆ. ಸದ್ಯ, ಮಹೇಂದ್ರ ನೀಡಿದ್ದ ಮೆಡಿಸಿನ್‌ನ ಪ್ರಮಾಣ ಮತ್ತು ಉದ್ದೇಶ ಕುರಿತಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

