ರಾಜ್ಯ ರಾಜಕಾರಣದಿಂದ ದಿಲ್ಲಿ ರಾಜಕಾರಣದವರೆಗೆ ಮತ್ತೊಂದು ಹೊಸ ಸಂಘರ್ಷ ಶುರುವಾಗಿದೆ. ರಾಜ್ಯಗಳ ಖನಿಜ ಹಕ್ಕುಗಳಿಗೆ ಕುತ್ತು ತರಲಿದೆ ಎಂದು ಆರೋಪಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸರ್ಕಾರದ ಗಣಿಗಾರಿಕೆ ಮತ್ತು ಖನಿಜಗಳ ತಿದ್ದುಪಡಿ ಮಸೂದೆ-2026ನ್ನು ಕೂಡಲೇ ಹಿಂಪಡೆಯಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ. ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ಮಸೂದೆಯಲ್ಲಿರುವ ಕೆಲವು ಪ್ರಸ್ತಾವನೆಗಳು ಖನಿಜ ಹಕ್ಕುಗಳು ಹಾಗೂ ಭೂಮಿಯ ಮೇಲಿನ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರವನ್ನು ಗಂಭೀರವಾಗಿ ಸೀಮಿತಗೊಳಿಸುತ್ತವೆ ಎಂಬುದು ಡಿಸಿಎಂ ಪರಮೇಶ್ವರ್ ಅವರ ಮುಖ್ಯ ಆಕ್ಷೇಪವಾಗಿದೆ. ಖನಿಜ ಸಂಪನ್ಮೂಲಗಳ ವಿಚಾರದಲ್ಲಿ ಸಂವಿಧಾನವು ರಾಜ್ಯ ಸರ್ಕಾರಗಳಿಗೆ ನೀಡಿರುವ ಹಕ್ಕುಗಳನ್ನು ಕೇಂದ್ರದ ಈ ಹೊಸ ಪ್ರಸ್ತಾವನೆ ದುರ್ಬಲಗೊಳಿಸಲಿದೆ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ರಾಜ್ಯ ಪಟ್ಟಿಯ 49 ಮತ್ತು 50ನೇ ನಮೂದುಗಳು ಖನಿಜಗಳ ಮೇಲಿನ ಶಾಸನಾತ್ಮಕ ಹಾಗೂ ಆರ್ಥಿಕ ಅಧಿಕಾರವನ್ನು ಸ್ಪಷ್ಟವಾಗಿ ರಾಜ್ಯಗಳಿಗೇ ನೀಡಿವೆ. ಇದರ ಜೊತೆಗೆ, ಈ ಕುರಿತು 2024ರಲ್ಲಿ ಬಂದ ಸುಪ್ರೀಂ ಕೋರ್ಟ್ ತೀರ್ಪೂ ಕೂಡ ರಾಜ್ಯಗಳ ಹಕ್ಕನ್ನು ಮತ್ತಷ್ಟು ಬಲಪಡಿಸಿದೆ ಎನ್ನುವುದನ್ನು ಪರಮೇಶ್ವರ್ ಅವರು ತಮ್ಮ ಪತ್ರದಲ್ಲಿ ವಿಶೇಷವಾಗಿ ನೆನಪಿಸಿದ್ದಾರೆ.
ಯಾವುದೇ ಮಹತ್ವದ ಮಸೂದೆ ಅಥವಾ ತಿದ್ದುಪಡಿ ತರುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಸಮರ್ಪಕ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರ ಮುಂದುವರಿಯುತ್ತಿರುವುದು ‘ಸಹಕಾರಿ ಒಕ್ಕೂಟ’ ತತ್ವಕ್ಕೆ ವಿರುದ್ಧವಾಗಿದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ನಿರ್ಧಾರಗಳು ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ಮೇಲೂ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಹಾಗಾಗಿ, ಕೇಂದ್ರ ಸರ್ಕಾರ ಕೂಡಲೇ ಈ ಮಸೂದೆಯನ್ನು ಹಿಂಪಡೆದು, ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಒಮ್ಮತದ ಹೊಸ ಚೌಕಟ್ಟು ರೂಪಿಸಬೇಕು ಎಂಬುದು ಕರ್ನಾಟಕ ಸರ್ಕಾರದ ಪ್ರಮುಖ ಒತ್ತಾಯವಾಗಿದೆ.




