15,000 ಶಿಕ್ಷಕರ ನೇಮಕಾತಿ ಶುರು – ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ!

ಸರ್ಕಾರಿ ಶಿಕ್ಷಕರಾಗಬೇಕು ಎಂದು ಕನಸು ಕಂಡಿರುವ ಹಾಗೂ ಅದಕ್ಕಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಬಂಪರ್ ಗುಡ್‌ ನ್ಯೂಸ್. ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬರೋಬ್ಬರಿ 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇಂದಿನಿಂದಲೇ ಅಂದರೆ ಆಗಸ್ಟ್ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ!

ಒಟ್ಟು 15,000 ಹುದ್ದೆಗಳಲ್ಲಿ ಯಾವ ವಿಭಾಗದಲ್ಲಿ ಎಷ್ಟು ಖಾಲಿ ಇವೆ ಎಂಬುದನ್ನು ನೋಡುವುದಾದರೆ:

ಮೊದಲನೆಯದಾಗಿ, PST/PE Grade-2 ವಿಭಾಗದಲ್ಲಿ 1,050 ಹುದ್ದೆಗಳಿವೆ. ಎರಡನೆಯದಾಗಿ, ಅತಿ ಹೆಚ್ಚು ಅಂದರೆ ಗ್ರಾಜ್ಯುಯೇಟ್ ಪ್ರೈಮರಿ ಟೀಚರ್ ಅಥ್ವಾ GPT/CST ವಿಭಾಗದಲ್ಲಿ ಬರೋಬ್ಬರಿ 9,000 ಹುದ್ದೆಗಳಿದ್ದು, ಇದರಲ್ಲಿ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ.

ಮೂರನೆಯದಾಗಿ, AM/PE Grade-1 ವಿಭಾಗದಲ್ಲಿ ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳನ್ನು ಸೇರಿಸಿ ಒಟ್ಟು 4,950 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಆಸಕ್ತರು ಇಂದಿನಿಂದ ಅಂದರೆ ಆಗಸ್ಟ್ 18, 2026ರಿಂದ ಸೆಪ್ಟೆಂಬರ್ 7, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ‘New User’ ನೋಂದಣಿ ಮಾಡಿಕೊಳ್ಳುವ ಮೂಲಕ ನಿಮ್ಮ ಲಾಗಿನ್ ಕ್ರೆಡೆನ್ಸಿಯಲ್ಸ್ ಪಡೆದು ಅರ್ಜಿಯನ್ನು ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸುವಾಗ ವೈಯಕ್ತಿಕ ವಿವರಗಳು ಹಾಗೂ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಅಪ್‌ಲೋಡ್ ಮಾಡಲು ಮರೆಯದಿರಿ.

1ರಿಂದ 8ನೇ ತರಗತಿ ಬೋಧನೆಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಅಂದ್ರೆ TET ಕಡ್ಡಾಯವಾಗಿದ್ದು, ಆಯಾ ಹುದ್ದೆಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ ಇರಬೇಕು. ಇನ್ನು ನೇಮಕಾತಿ ಪರೀಕ್ಷೆಯು ತಲಾ 100 ಅಂಕಗಳ ಪತ್ರಿಕೆ-1 ಮತ್ತು ಪತ್ರಿಕೆ-2 ಅನ್ನು ಹೊಂದಿರಲಿದೆ. ಎರಡೂ ಪತ್ರಿಕೆಗಳಲ್ಲಿ ಕನಿಷ್ಠ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಕೊನೆಯ ದಿನದವರೆಗೆ ಕಾಯದೆ, ಅರ್ಹತೆ ಇರುವೆಡೆ ಇಂದೇ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಶಿಕ್ಷಕರಾಗುವ ನಿಮ್ಮ ಕನಸನ್ನ ನನಸು ಮಾಡಿಕೊಳ್ಳಿ.

About The Author