Gadag News: ಗದಗ: ಯುವಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ. ಜಿಮ್ಸ್ ನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ವಂದನಾ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.
ಗದಗದ ಬೆಟಗೇರಿ ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ಹಾಸ್ಟೇಲ್‌ನಲ್ಲಿ ಈ ಘಟನೆ ನಡೆದಿದ್ದು, ಫಿನಾಾಯಿಲ್ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಪ್‌ರಯತ್ನಿಸಿದರೂ ಕೂಡ, ಚಿಕಿತ್ಸೆ ಫಲಿಸದೇ ವಂದನಾ ಪ್ರಾಣ ಬಿಟ್ಟಿದ್ದಾಳೆ.
ವಂದನಾ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವಿರಪಾಪೂರ ತಾಂಡಾದ ನಿವಾಸಿಯಾಗಿದ್ದು, 19 ವರ್ಷದ ವಂದನಾಗೆ, 47 ವರ್ಷದ ಕಿರಣ ಎಂಬಾತ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ದಿನ ನಿತ್ಯ ಫೋನ್ ಮಾಡಿ, ತನ್ನನ್ನು ಮದುವೆಯಾಗುವಂತೆ ಕಿರಣ್ ಕಿರುಕುಳ ನೀಡುತ್ತಿದ್ದ. ಮದುವೆ ಆಗದೆ ಹೋದ್ರೆ ಫೋಟೋಸ್ ಗಳನ್ನು ಎಡಿಟ್ ಮಾಡಿ ಸೊಶಿಯಲ್ ಮೀಡಿಯಾಗೆ ಹಾಕುತ್ತೇನೆ ಎಂದು ಹೆದರಿಸಿದ್ದಾನೆಂದು ಆರೋಪಿಸಲಾಗಿದೆ.
ವಂದನಾಳ ಸಾವಿಗೆ ಕಿರಣ್ ಕಾರಣ ಅಂತಾ ಪೋಷಕರು ಆರೋಪಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.