ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಇಪಿಎಫ್‌ಒ ಸಂಸ್ಥೆಯಿಂದ ಮಹತ್ವದ ಸೂಚನೆ ಹೊರಬಿದ್ದಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯಡಿ ಬರೋಬ್ಬರಿ 15 ಸಾವಿರ ರೂಪಾಯಿ ಆರ್ಥಿಕ ಲಾಭ ಪಡೆಯಲು ಉದ್ಯೋಗಿಗಳು ಕೆಲವು ಅಗತ್ಯ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಯೋಜನೆಯ ಹಣ ನಿಮ್ಮ ಕೈ ಸೇರುವುದಿಲ್ಲ.
ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಇದರಡಿ ಅರ್ಹ ಉದ್ಯೋಗಿಗಳಿಗೆ ಒಟ್ಟು 15 ಸಾವಿರ ರೂಪಾಯಿ ಸಿಗಲಿದೆ. ವಿಶೇಷವೆಂದರೆ ಈ ಹಣ ಒಂದೇ ಬಾರಿಗೆ ಬಾರದೆ, ಎರಡು ಹಂತಗಳಲ್ಲಿ ಜಮೆಯಾಗುತ್ತದೆ. ಮೊದಲ ಹಂತದಲ್ಲಿ 8 ಸಾವಿರ ರೂಪಾಯಿ ಹಾಗೂ ಎರಡನೇ ಹಂತದಲ್ಲಿ 7 ಸಾವಿರ ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರಲಿದೆ. ಇನ್ನು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೂ ಪ್ರತಿ ಉದ್ಯೋಗಿಗೆ ಗರಿಷ್ಠ 3 ಸಾವಿರ ರೂಪಾಯಿ ವರೆಗೆ ಪ್ರೋತ್ಸಾಹಧನ ಸಿಗಲಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಮಾಸಿಕ ಒಂದು ಲಕ್ಷ ರೂಪಾಯಿಯೊಳಗಿನ ವೇತನ ಪಡೆಯುವ ನೌಕರರು ಅರ್ಹರಾಗಿದ್ದಾರೆ. ವಿಶೇಷವೆಂದರೆ ಇದರ ಲಾಭ ಪಡೆಯಲು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಪಿಎಫ್ ಖಾತೆ ಹೊಂದಿದ್ದು, ಸತತ ಆರು ತಿಂಗಳ ಕಾಲ ಪಿಎಫ್ ಹಣ ಜಮೆಯಾಗಿದ್ದರೆ ಸಾಕು.
ಹಾಗಾದರೆ ಹೊಸ ಉದ್ಯೋಗಿಗಳು ಏನೆಲ್ಲಾ ಮಾಡಬೇಕು ಅನ್ನೋದನ್ನ ನೋಡುವುದಾದ್ರೆ, ಮೊದಲನೆಯದಾಗಿ, ನಿಮ್ಮ UAN ಸಂಖ್ಯೆ ಸಕ್ರಿಯವಾಗಿರಬೇಕು. ಅದಕ್ಕಾಗಿ ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಎರಡನೆಯದಾಗಿ, ನಿಮ್ಮ ಪಿಎಫ್ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಿ. ಆ ಖಾತೆಯಲ್ಲಿ ಡಿಬಿಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಸೌಲಭ್ಯ ಇರಬೇಕು. ಇದರೊಂದಿಗೆ NPCI ಮ್ಯಾಪಿಂಗ್ ಕೂಡ ಸರಿಯಾಗಿ ಪೂರ್ಣಗೊಂಡಿರಬೇಕು.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಸೌಲಭ್ಯ ಇಲ್ಲದಿದ್ದರೆ, ಕೂಡಲೇ ಬ್ಯಾಂಕ್‌ಗೆ ಭೇಟಿ ನೀಡಿ ಅದನ್ನು ಸರಿಪಡಿಸಿಕೊಳ್ಳಿ. ಈ ಎಲ್ಲಾ ಕೆಲಸಗಳು ಸರಿಯಾಗಿದ್ದರೆ ಮಾತ್ರ ಸರ್ಕಾರದ ಕಡೆಯಿಂದ ಸಿಗುವ 15 ಸಾವಿರ ರೂಪಾಯಿ ಹಣ ಯಾವುದೇ ತೊಂದರೆಯಿಲ್ಲದೆ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗುತ್ತದೆ ಎಂದು ತಿಳಿದುಬಂದಿದೆ.




