ಗೌತಮ್ ಗಂಭೀರ್ ಇಂದು (ಮಂಗಳವಾರ) ಅಧಿಕೃತವಾಗಿ ರಾಹುಲ್ ದ್ರಾವಿಡ್ ಬದಲಿಗೆ ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಟಿ-20 ವಿಶ್ವಕಪ್ 2024ರ ಗೆಲುವಿನ ನಂತರ ದ್ರಾವಿಡ್ ಭಾರತದ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಟಿ-20 ವಿಶ್ವಕಪ್ ಮುಕ್ತಾಯಗೊಂಡ ನಂತರ ಮತ್ತೊಮ್ಮೆ ವಿಸ್ತರಣೆ ಅವಧಿಗೆ ಸಹಿ ಹಾಕುವುದಿಲ್ಲ ಎಂದು ಮಾಜಿ ಭಾರತೀಯ ಮುಖ್ಯ ಕೋಚ್ ರಾಹುಲ್ ಸ್ಪಷ್ಟಪಡಿಸಿದ್ದರು.
ಭಾರತ ತಂಡದ ಮಾಜಿ ಆಟಗಾರರಾದ ಗಂಭೀರ್ ಮತ್ತು ಡಬ್ಲ್ಯುವಿ ರಾಮನ್ ಅವರನ್ನು ಕಳೆದ ತಿಂಗಳು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಸ್ಥಾನಕ್ಕಾಗಿ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಿತ್ತು. ಈ ಹುದ್ದೆಗಾಗಿ ಮುಂಚೂಣಿಯಲ್ಲಿದ್ದ ಗಂಭೀರ್ ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೋಚ್ ಸ್ಥಾನಕ್ಕೆ ರಾಜೀನಾಮೆ ಹೇಳಿ ವಿದಾಯ ವೀಡಿಯೊವನ್ನು ಹಂಚಿಕೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನ 2024 ಆವೃತ್ತಿಯಲ್ಲಿ ಕೆಕೆಆರ್ ತಂಡದ ಮಾರ್ಗದರ್ಶಕರಾಗಿ ಗಂಭೀರ ಕೆಲಸ ಮಾಡಿದ್ದರು ಮತ್ತು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2022 ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕೂಡ ಅವರು ಸೇವೆ ಸಲ್ಲಿಸಿದ್ದರು. ರಣಜಿ ಅಥವಾ ಯಾವುದೇ ದೇಶೀಯ ಕ್ರಿಕೆಟ್ ತಂಡಕ್ಕೆ ಅವರು ಕೋಚ್ ಆಗಿ ಸೇವೆ ಸಲ್ಲಿಸಿರಲಿಲ್ಲ.
ಮುಖ್ಯ ಕೋಚ್ ಆಗಿ ಗಂಭೀರ್ ಅವರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಿರುವ ಕುರಿತು ಈಗಾಗಲೇ ಬಿಸಿಸಿಐ ದೃಢಪಡಿಸಿದೆ. ಬಿಸಿಸಿಐನ ಮುಖ್ಯ ಕಾರ್ಯದರ್ಶಿ ಜಯ್ ಶಾ ಅವರು ಸಾಮಾಜಿಕ ಜಾಲತಾಣ Xನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ಗಂಭೀರ್ ಆದರ್ಶ ವ್ಯಕ್ತಿ ಎಂಬ ವಿಶ್ವಾಸವಿದೆ ಎಂದಿದ್ದಾರೆ. “ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಶ್ರೀ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಆಧುನಿಕ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿದೆ ಮತ್ತು ಗೌತಮ್ ಈ ಬದಲಾಗುತ್ತಿರುವ ಕ್ರಿಕೆಟ್ ಅನ್ನು ಹತ್ತಿರದಿಂದ ನೋಡಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಹಲವು ಸವಾಲುಗಳನ್ನು ಸ್ವೀಕರಿಸಿರುವ ಗೌತಮ್ ಅವರು ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನಾನು ನಂಬುತ್ತೇನೆ. ಅವರ ಅನುಭವ ಮತ್ತು ಸ್ಪಷ್ಟ ಯೋಜನೆಯ ಮೂಲಕ ಕೋಚಿಂಗ್ ಪಾತ್ರವನ್ನು ನಿಭಾಯಿಸುತ್ತಾರೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.