Udupi political News: ಉಡುಪಿ, ನ. 20: ರಾಜ್ಯದಲ್ಲಿ 2008 ರಿಂದ ನಿರ್ಮಿಸಿರುವ ಹೊಸ ಕಟ್ಟಡಗಳ ಜಿಯೋ ಮ್ಯಾಪಿಂಗ್ ಮೂಲಕ ಹೆಚ್ಚುವರಿಯಾಗಿ 3 ಸಾವಿರ ಕೋಟಿ ರೂಪಾಯಿ ಸೆಸ್ ಆದಾಯ ಸಂಗ್ರಹದ ಗುರಿಯಿದೆ ಎಂದು ಕಾರ್ಮಿಕ ಸಚಿವರು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ ಅಧ್ಯಕ್ಷ ಸಂತೋಷ್ ಎಸ್. ಲಾಡ್ ಹೇಳಿದರು.
ಮಣಿಪಾಲದ ರಜತಾದ್ರಿಯಲ್ಲಿನ ಜಿಲ್ಲಾ ಪಂಚಾಯತ್‌ನ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮತ್ತು ಉದ್ಯಮಿದಾರರು ಹಾಗೂ ಮಾಲೀಕ ವರ್ಗದ ಸಂಘಟನೆ ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ನಡೆದ ಸಮಾಲೋಚನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಕಳೆದ 2008ರಿಂದಲೂ ರಾಜ್ಯದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 1 ಸಾವಿರ ಕೋಟಿ ರೂಪಾಯಿ ಸೆಸ್ ಆದಾಯದಲ್ಲಿ ಕೇಂದ್ರದ ಪಾಲು ಬಹಳ ವಿರಳವಾಗಿದೆ. ಹೀಗಾಗಿ ಜಿಯೋ ಮ್ಯಾಪಿಂಗ್ ನೆರವಿನಿಂದ ಕೇಂದ್ರ ಸರ್ಕಾರ ಸಹಿತ ಕಟ್ಟಡ ನಿರ್ಮಾಣದಾರರು ನೀಡಬೇಕಾದ ಬಾಕಿ ಸೆಸ್ ವಸೂಲಿಗೂ ಸರ್ಕಾರ ಮತ್ತು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಕಾರ್ಮಿಕ ನಿಧಿ ದುರ್ಬಳಕೆ ಆರೋಪ
——————————————
ಕಳೆದ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಕೋವಿಡ್ ವೇಳೆ ಕಿಟ್ ವಿತರಣೆ ಸಹಿತ ಕಾರ್ಮಿಕ ನಿಧಿ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಕಾರ್ಮಿಕ ಮಂಡಳಿಯಲ್ಲಿ ಇದ್ದ 13 ಸಾವಿರ ಕೋಟಿ ರೂಪಾಯಿ ನಿಧಿಯಿಂದ 6 ಸಾವಿರದ 500ಕೋಟಿ ರೂಪಾಯಿ ಗಳಿಗೆ ಇಳಿಕೆಯಾಗಿದೆ. ಒಟ್ಟು 39 ಲಕ್ಷಕ್ಕೂ ಅಧಿಕ ಹೆಚ್ಚುವರಿ ಕಾರ್ಮಿಕರ ಕಾರ್ಡ್ ವಿತರಣೆಯಾಗಿದೆ ಎಂದರು.
ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ
——————————————–
ಕಳೆದ ಮೂರು ವರ್ಷಗಳಲ್ಲಿ ಕೇವಲ 3 ಲಕ್ಷ ಕಾರ್ಮಿಕ ಮಕ್ಕಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗಿತ್ತು. ಆದರೆ, ಈ ಬಾರಿ ವಿದ್ಯಾರ್ಥಿವೇತನಕ್ಕಾಗಿ 13 ಲಕ್ಷ ಅರ್ಜಿಗಳು ಬಂದಿವೆ. ಹಾಗಾಗಿ, ಈ ಬಾರಿ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಇಎಸ್‌ಐಗಾಗಿ ವಾರ್ಷಿಕ ರೂ. 49 ಕೋಟಿ
———————————————-
ಕಾರ್ಮಿಕರ ವಿಮಾ ಸೌಲಭ್ಯದಾರರಿಗೆ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲು ವಾರ್ಷಿಕ ರೂ.49 ಕೋಟಿ ವ್ಯಯವಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ದೇಶದಲ್ಲಿ ಶೇ 90ರಷ್ಟು ಹಾಗೂ ರಾಜ್ಯದಲ್ಲಿ ಶೇ 80ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ ಇ-ಕಾರ್ಮಸ್, ಕಟ್ಟಡ ನಿರ್ಮಾಣ, ಸಿನಿಮಾ, ಮನೆಗೆಲಸ ಸೇರಿದಂತೆ ಒಟ್ಟು 1.20 ಕೋಟಿಯಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರೆಲ್ಲರೂ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಟೈಲರ್ ಗಳಿಗೂ ಸಾಮಾಜಿಕ ಭದ್ರತೆ ಯೋಜನೆ ಒದಗಿಸಬೇಕೆಂಬ ಬೇಡಿಕೆ ಇದ್ದು, ಈ ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮೊಹಮ್ಮದ್ ಮೊಹಸೀನ್, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಡಿ. ಭಾರತಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಇಎಸ್ ಐ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ
——————————————————————–
ಉಡುಪಿಯಲ್ಲಿ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಉದ್ದೇಶಿಸಿದ ಭೂಮಿಯ ದಾಖಲೆಗಳ ಸಹಿತ ಮರು ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ನೀಡಿದ ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.