Health Tips: ಮಕ್ಕಳು ಯಾವ ರೀತಿ ಆಹಾರ ಸೇವನೆ ಮಾಡುತ್ತಾರೋ, ಅವರ ಭವಿಷ್ಯ ಅಷ್ಟು ಆರೋಗ್ಯಕರವಾಗಿರುತ್ತದೆ. ಚಿಕ್ಕಂದಿನಲ್ಲೇ ಅವರಿಗೆ ಜಂಕ್ ಫುಡ್, ಎಣ್ಣೆ ತಿಂಡಿ, ಕುರುಕಲು ತಿಂಡಿ, ಬೀದಿ ಬದಿ ತಿಂಡಿ, ಬೇಕರಿ ತಿಂಡಿ, ಚಾಕೋಲೇಟ್ಸ್ ಹೀಗೆ ಅನಾರೋಗ್ಯಕರ ತಿಂಡಿಯೇ ನೀಡಿದರೆ, ಅವರ ಆರೋಗ್ಯವೂ ದಿನಗಳೆದಂತೆ ಹಾಳಾಗಿ ಹೋಗುತ್ತದೆ.
ಹಾಗಾಗಿ ಮಗುವಿಗೆ 2 ವರ್ಷವಾದರೂ ತಾಯಿಯ ಹಾಲು ಕುಡಿಸಬೇಕು. ಬಳಿಕ ಆರೋಗ್ಯಕರವಾದ ಆಹಾರಗಳನ್ನು ನೀಡಬೇಕು. ಅದೇ ರೀತಿ ಮಕ್ಕಳು ಶಾಲೆಗೆ ಹೋಗುವಾಗ, ಅವರಿಗೆ ಆದಷ್ಟು ಆರೋಗ್ಯಕರ ಆಹಾರವನ್ನೇ ನೀಡಬೇಕು. ಶಾಲೆಯಲ್ಲಿ ಹಸಿವಾದಾಗ, ಮಕ್ಕಳು ಟಿಫಿನ್ ಬಾಕ್ಸ್‌ನಲ್ಲಿ ಏನೇ ಇದ್ದರೂ ತಿನ್ನುತ್ತಾರೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಆದಷ್ಟು ಜಂಕ್ ಫುಡ್ ಕಡಿಮೆ ಮಾಡಿ, ರುಚಿಕರ ಆರೋಗ್ಯಕರ ಆಹಾರ ನೀಡಬೇಕು.
ಮಕ್ಕಳಿಗೆ ಟಿಫಿನ್ ಬಾಕ್ಸ್‌ನಲ್ಲಿ ಸ್ವಲ್ಪ ಡ್ರೈಫ್ರೂಟ್ಸ್, ನಟ್ಸ್ ಹಾಕಿಕೊಡಿ. ಅಥವಾ ಎಲ್ಲವನ್ನೂ ಸೇರಿಸಿ, ಆರೋಗ್ಯಕರ ಲಡ್ಡು ತಯಾರಿಸಿ ಕೊಡಿ. ಸ್ವಲ್ಪ ಚೇಂಜ್ ಮಾಡಬೇಕು ಎನ್ನಿಸಿದರೆ, ಡಾರ್ಕ್ ಚಾಕೋಲೇಟ್ ಮೆಲ್ಟ್ ಮಾಡಿ, ಡ್ರೈಫ್ರೂಟ್ಸ್ ನಿಂದ ತಯಾರಿಸಿದ ಪುಟ್ಟ ಪುಟ್ಟ ಲಡ್ಡುಗಳನ್ನು ಅದ್ದಿ, ಚಾಕೋಲೇಟ್ ರೆಡಿ ಮಾಡಿ ಕೊಡಿ. ಇದನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ಡ್ರೈಫ್ರೂಟ್ಸ್ ಮಕ್ಕಳಿಗೆ ನೀಡಬಾರದು.
ಮಕ್ಕಳಗೆ ಹಣ್ಣುಗಳನ್ನು ಕಟ್ ಮಾಡಿ ನೀಡಬೇಡಿ. ಆದಷ್ಟು ಪೂರ್ತಿಯಾಗಿರುವ, ಕಟ್ ಮಾಡದ ಹಣ್ಣನ್ನು ತೊಳೆದು ಬಾಕ್ಸ್‌ಗೆ ಹಾಕಿ. ಮತ್ತು ಆ ಹಣ್ಣು ಆದಷ್ಟು ಫ್ರೆಶ್ ಆಗಿರಲಿ. ಆ್ಯಪಲ್, ಬಾಳೆಹಣ್ಣು, ಕಿತ್ತಳೆ, ಇತ್ಯಾದಿ 1 ಹಣ್ಣು ನೀಡಬಹುದು. ಯಾಕಂದ್ರೆ ಕಟ್ ಮಾಡಿ ಹಣ್ಣು ನೀಡಿದರೆ, ಅದರಲ್ಲಿರುವ ಪೋಷಕಾಂಶ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳ ಆರೋಗ್ಯ ಅಷ್ಟು ಉತ್ತಮವಾಗಿರುವುದಿಲ್ಲ.
ಇದರೊಂದಿಗೆ ಮಕ್ಕಳಿಗೆ ಪ್ರತಿದಿನ ನೀಡುವಂಥ ಚಪಾತಿ, ದೋಸೆ, ಇಡ್ಲಿ, ಅನ್ನದ ತಿಂಡಿಯನ್ನು ನೀಡಬಹುದು. ಆದರೆ ಪೂರಿ, ಸಮೋಸ, ವಡೆಯಂಥ ಕರಿದ ಪದಾರ್ಥವನ್ನು ಬೆಳಗ್ಗಿನ ತಿಂಡಿಯಲ್ಲಿ ಎಂದಿಗೂ ನೀಡಬೇಡಿ. ಆದಷ್ಟು ಹಸಿ ತರಕಾರಿ, ಮೊಳಕೆ ಕಾಳು, ತುಪ್ಪ, ಮೊಸರು ಇರುವಂಥ ತಿಂಡಿ ಕೊಡಿ.