ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರೊಬ್ಬರು “ಓ ದೇವರೇ ಭಾರತದ ಕ್ರಿಕೆಟ್ ಅನ್ನು ಕಾಪಾಡು” ಅಂತ ದೇವರ ಮೋರೆ ಹೋಗಿದ್ದಾರೆ. ಅಷ್ಟಕ್ಕೂ ಭಾರತೀಯ ಕ್ರಿಕೆಟ್ ಚನ್ನಾಗಿಯೇ ಇದೆಯಲ್ಲ… ಹೀಗೆ ಹೇಳಿದ್ಯಾರು..? ಯಾಕೆ ಹೀಗೆ ಹೇಳಿದ್ರು ಅನ್ನೋ ಪ್ರಶ್ನೆ ನಮ್ಮನ್ನು ಕಾಡದೇ ಬಿಡೋದಿಲ್ಲ…
ಹೌದು ಸದ್ಯ ಭಾರತೀಯ ಕ್ರಿಕೆಟಿಗೆ ಸಂಕಷ್ಟ ಎದುರಾಗಿಲ್ಲ ಆದ್ರೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಅನ್ನೋದು ಈ ಮಾಜಿ ಕ್ರಿಕೆಟಿಗರ ಆತಂಕ. ಹೀಗೆ ಆತಂಕ ಪಡುವದಕ್ಕೆ ಕಾರಣ, ಭಾರತೀಯ ಕ್ರಿಕೆಟ್ ಸಂಸ್ಥೆ ರಾಹುಲ್ ದ್ರಾವಿಡ್ ರನ್ನ ನಡೆಸಿಕೊಳ್ಳುತ್ತಿರುವ ರೀತಿ. ಯಸ್..ದಿ ವಾಲ್ ಅಂತಾನೇ ಫೇಮಸ್ ಆಗಿರುವ ರಾಹುಲ್ ದ್ರಾವಿಡ್, ಭಾರತೀಯ ಕ್ರಿಕೆಟ್ ಬೆಳವಣಿಗೆಗಾಗಿ ಸದಾ ಮುಂದಿರುವ ವ್ಯಕ್ತಿ. ಜೆಂಟಲ್ ಮ್ಯಾನ್ ಗೇಮ್ ಅಂತಾನೇ ಕರೆಸಿಕೊಳ್ಳುವ ಕ್ರಿಕೆಟ್ ನ ನಿಜವಾದ ಜೆಂಟಲ್ ಮ್ಯಾನ್.
ಸದ್ಯ ದ್ರಾವಿಡ್ NCA ಮುಖ್ಯಸ್ಥರಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟಿಗೆ ಬೇಕಾದ ಎಲ್ಲಾ ರೀತಿಯ ವಿದ್ಯೆಯನ್ನು ಕಲಿಸಿಕೊಡುವ ಕಾಯಕದಲ್ಲಿದ್ದಾರೆ. ಭಾರತೀಯ ಕಿರಿಯರ ತಂಡದ ಕೋಚ್ ಆಗಿ, ಯಶಸ್ವಿಯಾಗಿದ್ದ ರಾಹುಲ್ ಗೆ ಸದ್ಯ ಬಿಸಿಸಿಐ ನೋಟಿಸ್ ನೀಡಿದೆ. ಹೀಗಾಗಿ ಬಿಸಿಸಿಐ ನಡೆಗೆ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹಾಗೂ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾದ-ಭಜ್ಜಿ ಕೋಪಕ್ಕೆ ಕಾರಣವೇನೂ..?
ಸದ್ಯ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಫ್ಯಾಷನ್ ಶುರುವಾಗಿದೆ. ಅದೇನು ಅಂದ್ರೆ ಸ್ವಹಿತಾಸಕ್ತಿ ಸಂಘರ್ಷ. ಸುದ್ದಿಯಲ್ಲಿ ಉಳಿಯಲು ಇದು ಕೆಲವರಿಗೆ ಉತ್ತಮ ಮಾರ್ಗವಾಗಿದೆ. ದೇವರೆ ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡು… ದ್ರಾವಿಡ್ ರಂತವರೂ ಬಿಸಿಸಿಐನಿಂದ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಪಡೆಯುತ್ತಾರೆ ಎಂದು, ಸೌರವ್ ಗಂಗೂಲಿ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹರ್ಭಜನ್ ಸಿಂಗ್ ಸಹ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ??? ಇದು ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯುತ್ತಿಲ್ಲ…ಇಂತರ ಅದ್ಭುತ ವ್ಯಕ್ತಿಯನ್ನು ಭಾರತೀಯ ಕ್ರಿಕೆಟ್ ಪಡೆಯಲು ಸಾಧ್ಯವಿಲ್ಲ.
ಇಂತಹ ದಂತಕಥೆಗಳಿಗೆ ನೋಟಿಸ್ ಕಳುಹಿಸುವುದು ಅವರನ್ನು ಅವಮಾನಿಸಿದಂತೆ.. ಕ್ರಿಕೆಟ್ ಉತ್ತಮವಾಗಲು ಇಂತಹವರ ಸೇವೆ ಬೇಕು. . ಹೌದು ದೇವರೆ ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡು ಎಂದು ಟ್ವೀಟಿಸಿದ್ದಾರೆ.
ಬಿಸಿಸಿಐ ರಾಹುಲ್ ದ್ರಾವಿಡ್ ಅವರಿಗೆ ಸ್ವಹಿತಾಸಕ್ತಿ ಸಂಘರ್ಷ ಆರೋಪದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯ ಸಂಜೀವ್ ಗುಪ್ತಾ, ರಾಹುಲ್ ದ್ರಾವಿಡ್ ವಿರುದ್ಧ ದೂರು ನೀಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರಾಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಇನ್ನು ಇಂಡಿಯಾ ಸಿಮೆಂಟ್ ಗ್ರೂಪ್ ನಲ್ಲಿ ದ್ರಾವಿಡ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಿಸಿಸಿಐ ಸ್ವಹಿತಾಸಕ್ತಿ ನಿಮಯಕ್ಕೆ ವಿರುದ್ಧವಾಗಿದೆ ಎಂದು ಸಂಜೀವ್ ದೂರಿದ್ದರು.
ಈ ಸಂಬಂಧ ಬಿಸಿಸಿಐ ರಾಹುಲ್ ದ್ರಾವಿಡ್ ಅವರಿಗೆ ನೋಟಿಸ್ ನೀಡಿದ್ದು, 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ. ದ್ರಾವಿಡ್ ಉತ್ತರಿಸಿದ ಬಳಿಕ ಪ್ರಕರಣವನ್ನು ಪರಿಶೀಲಿಸಲಿದ್ದೇವೆ ಎಂದು ಬಿಸಿಸಿಐ ಹೇಳಿದೆ. ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ವಿರುದ್ದವೂ ದೂರುದಾರ ಸಂಜೀವ್ ಗುಪ್ತಾ, ಸ್ವಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದರು..