Saturday, November 8, 2025

Latest Posts

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ: ನಿಖಿಲ್ ಕಿಡಿ

- Advertisement -

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರಣ ನೀಡಿ ದಸರಾ ರಜೆ ವಿಸ್ತರಿಸಿರುವ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.

ಪೂರ್ವ ತಯಾರಿ ಇಲ್ಲದೆ, ಯಾರದೋ ಒತ್ತಡಕ್ಕೆ ಮಣಿದು ಸರ್ಕಾರ ಆತುರದಲ್ಲಿ ಸಮೀಕ್ಷೆ ನಡೆಸುತ್ತಿದೆ ಎಂದು ನಿಖಿಲ್ ಆರೋಪಿಸಿದ್ದಾರೆ. ಜಾತಿಗಣತಿ ದಿನದಿಂದ ದಿನಕ್ಕೆ ಗೊಂದಲಮಯವಾಗುತ್ತಿದೆ. ಈಗ ಸಮೀಕ್ಷೆಗಾಗಿ ಶಾಲಾ ಮಕ್ಕಳ ಭವಿಷ್ಯವನ್ನೇ ಪಣಕ್ಕಿಟ್ಟಿದೆ. ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಜಾತಿ ಮುಖ್ಯ ಎಂಬುದು ಇದರ ಮೂಲಕ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

2 ಕೋಟಿ ಮನೆಗಳಲ್ಲಿ ವಾಸಿಸುವ 7 ಕೋಟಿ ಜನರನ್ನು ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡುವುದು ಅಸಾಧ್ಯ ಎಂಬುದು ಆರಂಭದಲ್ಲೇ ಗೊತ್ತಿತ್ತು. ದಸರಾ ಹಾಗೂ ದೀಪಾವಳಿ ರಜೆಯ ನಂತರವೇ ಸರ್ಕಾರಿ ಶಾಲೆಗಳು ಪುನಃ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಒಂದು ತಿಂಗಳ ಕಾಲ ಶಾಲೆಯಿಂದ ದೂರವಿರಬೇಕಾಗಿದೆ. ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುವುದರಿಂದ ಲಕ್ಷಾಂತರ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶಿಕ್ಷಣ ಹಿನ್ನಡೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಸಮೀಕ್ಷೆ ನಿಜವಾಗಿಯೂ ಸಾಮಾಜಿಕ ಕಲ್ಯಾಣಕ್ಕಾಗಿ ಆಗಿದ್ದರೆ, ಬೇಸಿಗೆ ರಜೆಯ ಸಮಯದಲ್ಲಿ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಯೋಜಿಸಬಹುದಾಗಿತ್ತು. ಆದರೆ ಸರ್ಕಾರ ರಾಜಕೀಯ ಲಾಭಕ್ಕಾಗಿ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅಡ್ಡಿ ಉಂಟುಮಾಡುತ್ತಿದೆ. ಈ ನಿಲುವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ,” ಎಂದು ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss