ಮೈಸೂರು ಚೆಲುವಾಂಬ ಆಸ್ಪತ್ರೆಯಲ್ಲಿ ಹೆಚ್ಚಾದ ಶಿಶು ಮರಣ: ಜಿಲ್ಲೆಯ ಆರೋಗ್ಯ ವ್ಯವಸ್ಥೆಗೇ ಅನಾರೋಗ್ಯ ಎಂದ ಸಿ.ಟಿ.ರವಿ

Political News: ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ಶಿಶುಗಳ ಮರಣದ ಪ್ರಮಾಣ ಹೆಚ್ಚುತ್ತಿದ್ದು, ವಿರೋಧ ಪಕ್ಷ ಬಿಜೆಪಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲೇ ನಿಲ್ಲದ ಶಿಶು ಮರಣ! ಕಳೆದ 15 ತಿಂಗಳ ಅವಧಿಯಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 551 ನವಜಾತ ಶಿಶುಗಳು ಸಾವನ್ನಪ್ಪಿರುವುದು ಆಘಾತಕಾರಿ. ಜಿಲ್ಲೆಯ ಆರೋಗ್ಯ ವ್ಯವಸ್ಥೆಗೇ ಅನಾರೋಗ್ಯ ಬಡಿದಿರುವುದಕ್ಕೆ ಇದು ಸಾಕ್ಷಿಯಾಗಿದೆ.

2026ರ ಮಾರ್ಚ್ ವೇಳೆಗೆ 110 ಹಸುಳೆಗಳು ಸಾವನ್ನಪ್ಪಿದ್ದು, ದಿನಕ್ಕೆ ಒಂದಕ್ಕಿಂತ ಹೆಚ್ಚು ಮಕ್ಕಳು ಅಸುನೀಗಿದಂತಾಗಿದೆ. ಇದು ಅತ್ಯಂತ ಗಂಭೀರವಾದ, ಆತಂಕಕಾರಿ ಬೆಳವಣಿಗೆ. ಬಡ ಜನರು ಕನಸು ಕಣ್ಣುಗಳಿಂದ ದಾಖಲಾಗುವ ಚೆಲುವಾಂಬ ಆಸ್ಪತ್ರೆ ಈಗ ಅಂತಹ ಕನಸುಗಳನ್ನು ಕಮರಿಸುವ ತಾಣವಾದಂತಾಗಿದೆ.

ಆಸ್ಪತ್ರೆಯ ಮೂಲ ಸೌಕರ್ಯಗಳ ಕೊರತೆಯಿಂದ ಇಷ್ಟು ಪ್ರಾಣಗಳು ಹೋಗಿದ್ದರೂ, ಅದನ್ನು ಸರಿಪಡಿಸುವ ಇಚ್ಛಾಶಕ್ತಿಯೇ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ತಕ್ಷಣವೇ ಚೆಲುವಾಂಬ ಆಸ್ಪತ್ರೆಯ ಮಕ್ಕಳ ಸಾವಿನ ಕುರಿತು ತನಿಖೆಯಾಗಬೇಕು. ಬಡವರ ಮಕ್ಕಳ ಜೀವ ಇಷ್ಟು ಅಗ್ಗವಾಯಿತೇ? ಭ್ರಷ್ಟಾಚಾರ, ಲೂಟಿಯ ನಡುವೆ ಸರ್ಕಾರಕ್ಕೆ ಸ್ವಲ್ಪವಾದರೂ ಮಾನವೀಯತೆ ಬರಲಿ ಎಂದು ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದ್ದಾರೆ.

About The Author