ಕೊನೆಗೂ ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಹೋರಾಟಕ್ಕೆ ರಾಜ್ಯ ಸರ್ಕಾರ ಮಂಡಿಯೂರಿದೆ. ಬಾಕಿ ವೇತನ ಪಾವತಿ, ವೇತನ ಪರಿಷ್ಕರಣೆ, ರಜೆಯ ಹಕ್ಕು ಸೇರಿ, ಹಲವು ಬೇಡಿಕೆಗಳ ಈಡೇರಿಕೆಗೆ, ನೌಕರರು ಬಿಗಿ ಪಟ್ಟು ಹಿಡಿದಿದ್ದಾರೆ. ನೌಕರರ ಸಂಘ ಹಲವು ಬಾರಿ ಸಿಎಂ, ಸಾರಿಗೆ ಸಚಿವರ ಭೇಟಿಗೆ ಪ್ರಯತ್ನಿಸಿದ್ರೂ ಯಾವುದೇ ಜಯ ಸಿಕ್ಕಿಲ್ಲ.
ಮೊದಲ ಸಭೆಯಲ್ಲಿ ನೌಕರರ ಬೇಡಿಕೆಗಳ ಬಗ್ಗೆ ಪರಿಶೀಲಿಸೋದಾಗಿ, ಸಿಎಂ ಸಿದ್ದರಾಮಯ್ಯ ಹೇಳಿದ್ರು. ಬಳಿಕ ಅದೂ ಈಡೇರಿಲ್ಲ. ಬಾಕಿ ವೇತನ ನೀಡೋಕೆ ಸಾಧ್ಯವಿಲ್ಲ. 2028ರವರೆಗೆ ವೇತನ ಪರಿಷ್ಕರಣೆ ಅಸಾಧ್ಯ ಅಂತಾ ಸರ್ಕಾರ ಕಡ್ಡಿ ಮುರಿದಂತೆ ಹೇಳಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದ ಈ ಧೋರಣೆ, ಸಾರಿಗೆ ನೌಕರರನ್ನು ರೊಚ್ಚಿಗೆಬ್ಬಿಸಿದೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಇರುವ ದುಡ್ಡು, ನಮಗಿಲ್ವಾ ಅಂತಾ ಕೆಂಡ ಕಾರ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ನೌಕರರನ್ನು ಹತ್ತಿಕ್ಕಲು ಎಸ್ಮಾ ಕಾಯ್ದೆ ಜಾರಿ ಮಾಡಿ, ಬಳಿಕ ಖಾಸಗಿ ನೌಕರರ ನೇಮಕಕ್ಕೂ ಮುಂದಾಗಿತ್ತು. ಆದ್ರೆ, ರಾಜ್ಯ ಸರ್ಕಾರದ ಕಾನೂನು ಕ್ರಮಕ್ಕೂ ನೌಕರರು ಸೆಡ್ಡು ಹೊಡೆದಿದ್ದು, ಹೋರಾಟದ ನಿಲುವಿನಿಂದ ಹಿಂದೆ ಸರಿದಿಲ್ಲ.
ಇದೀಗ ಸಾರಿಗೆ ನೌಕರರ ಉಗ್ರಾವತಾರದ ಎದುರು, ರಾಜ್ಯ ಸರ್ಕಾರವೇ ತಲೆಬಾಗಿದೆ. ಆಗಸ್ಟ್ 4ರ ಸೋಮವಾರ ಸಾರಿಗೆ ನೌಕರರ ಸಭೆ ಕರೆದಿದೆ. ಆಗಸ್ಟ್ 5ರಂದು ರಾಜ್ಯದಲ್ಲಿ ಮತಗಳ್ಳತನ ವಿರುದ್ಧದ, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ಇದೆ. ರಾಹುಲ್ ಗಾಂಧಿ ಅವರ ಹೋರಾಟ ಫ್ರೀಡಂ ಪಾರ್ಕ್‌ನಲ್ಲಿ ನಿಗಧಿಯಾಗಿದೆ. ಸಾರಿಗೆ ನೌಕರರು ಕೂಡ ಇದೇ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ, ಒಂದು ದಿನದ ಮೊದಲು, ಹೈವೋಲ್ಟೇಜ್ ಮೀಟಿಂಗ್ ಕರೆದಿದ್ದಾರೆ. ಸಾರಿಗೆ ನೌಕರರ ಮನವೊಲಿಸಿ ಮುಷ್ಕರ ನಿಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.