ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನರಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನು ಕೂಡ ಎಲ್ಲರ ಮನಸ್ಸಿನಲ್ಲಿ ಅವರನ್ನು ಕಳೆದುಕೊಂಡು ನೋವು ಕೊಂಚವೂ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಿದ್ದು, ಧಾರವಾಡದಲ್ಲೊಬ್ಬ ಗೃಹಿಣಿ ಪುನೀತ್ ಸಮಾಧಿ ದರ್ಶನಕ್ಕೆ ವಿಶೇಷವಾಗಿ ತೆರಳಿದ್ದಾರೆ.
ಹೀಗೆ ತೆರಳುವಾಗ ಆ ಮಹಿಳೆ ದಾರಿಯುದ್ದಕ್ಕೂ ನೇತ್ರದಾನ, ದೇಹದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಹೌದು ದ್ರಾಕ್ಷಾಯಿಣಿ ಪಟೀಲ ಎಂಬ ಮಹಿಳೆ ಅಪ್ಪು ಸಮಾಧಿನವರೆಗೆ ಓಡುತ್ತ ಜಾಗೃತಿ ಮೂಡಿಸುತ್ತ ಹೊರಟಿದ್ದಾರೆ. ಧಾರವಾಡದ ಈ ಮಹಿಳೆ ವಿಭಿನ್ನ ಜಾಗೃತಿಯೊಂದರ ಮೂಲಕ ಅವರ ಸಮಾಧಿ ಸ್ಥಳಕ್ಕೆ ಹೋಗುತ್ತಿದ್ದಾರೆ. ಹೌದು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ 30 ವರ್ಷದ ದ್ರಾಕ್ಷಾಯಿಣಿ ಪಾಟೀಲ್ ಎಂಬ ಮಹಿಳೆ. ಈ ಮಹಿಳೆಗೆ ಮೊದಲಿನಿಂದಲೂ ಪುನೀತ್ ಅಂದರೆ ಪಂಚಪ್ರಾಣ. ಮೂರು ಮಕ್ಕಳ ತಾಯಿಯಾಗಿರೋ ದಾಕ್ಷಾಯಿಣಿ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಒಳ್ಳೆಯ ಓಟಗಾರ್ತಿ. ಮದುವೆಯಾದ ಬಳಿಕ ಸಂಸಾರದ ಜಂಜಡದಲ್ಲಿ ಸಿಲುಕಿ, ಸಾಧನೆ ಅಲ್ಲಿಗೆ ನಿಂತು ಬಿಟ್ಟಿತು. ಆದರೆ ಮೂರು ಮಕ್ಕಳ ತಾಯಿಯಾಗಿರೋ ಆಕೆ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿನ ಪುನಿತ್ ಸಮಾಧಿವರೆಗೆ ಓಡುತ್ತಲೇ ಹೋಗಲಿರೋ ಆಕೆ, ಆ ಮೂಲಕ ತನ್ನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.