ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ – ಬಿಲ್‌ನಲ್ಲಿ ಈ ಕೋಡ್ ಇದೆಯಾ?

ನೀವು ಕೂಡ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದರೆ ಈ ಸುದ್ದಿ ನಿಮ್ಮ ಗಮನಕ್ಕೆ ಇರಲೇಬೇಕು. ನಿಮ್ಮ ಗೃಹಜ್ಯೋತಿ ದಾಖಲೆ ಪರಿಶೀಲನೆ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಬೆಸ್ಕಾಂ ಈಗ ಅತ್ಯಂತ ಸರಳ ದಾರಿಯನ್ನು ಕಲ್ಪಿಸಿಕೊಟ್ಟಿದೆ. ಆಗಸ್ಟ್ ತಿಂಗಳ ಕರೆಂಟ್ ಬಿಲ್‌ನಲ್ಲಿ ಒಂದು ವಿಶೇಷ ಕೋಡ್ ಪ್ರಿಂಟ್ ಆಗಿ ಬರಲಿದ್ದು, ಇದರ ಮೂಲಕ ನೀವು ಪರಿಶೀಲನೆ ಸ್ಥಿತಿಯನ್ನು ತಿಳಿಯಬಹುದು.

ಗೃಹಜ್ಯೋತಿ ದಾಖಲೆಗಳ ಪರಿಶೀಲನೆ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ಮನೆಗಳಿಗೆ ಭೌತಿಕ ಬಿಲ್ ವಿತರಣೆ ಮಾಡಿರಲಿಲ್ಲ. ಆದರೆ ಈಗ ಆಗಸ್ಟ್‌ನಿಂದ ಮತ್ತೆ ಬಿಲ್ ನೀಡಲು ಶುರು ಮಾಡಲಾಗಿದ್ದು, ಈ ಬಿಲ್‌ನ ಮೇಲ್ಭಾಗದಲ್ಲಿ ಖಾತೆ ಮಾಹಿತಿಯ ಪಕ್ಕದಲ್ಲಿಯೇ ‘GJSURVEYED’ ಎಂದು ಮುದ್ರಿಸಲಾಗಿದೆ. ನಿಮ್ಮ ಬಿಲ್‌ನಲ್ಲೂ ಈ ರೀತಿ ಬಂದಿದ್ದರೆ ನಿಮ್ಮ ದಾಖಲೆ ಪರಿಶೀಲನೆ ಯಶಸ್ವಿಯಾಗಿ ಮುಗಿದಿದೆ ಎಂದರ್ಥ. ಒಂದುವೇಳೆ ಒಂದೆರಡು ದಿನಗಳ ಹಿಂದೆ ವೆರಿಫಿಕೇಶನ್ ಮಾಡಿಸಿದವರಿಗೆ ಮುಂದಿನ ತಿಂಗಳ ಬಿಲ್‌ನಲ್ಲಿ ಈ ಅಪ್ಡೇಟ್ ಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಾಗಂತ ನಿಮ್ಮ ಬಿಲ್‌ನಲ್ಲಿ ಈ ಕೋಡ್ ಬಂದಿಲ್ಲವೆಂದರೆ ಯಾರು ಕೂಡ ಗಾಬರಿಯಾಗಬೇಕಿಲ್ಲ. ನಿಮ್ಮ ಮೊಬೈಲ್‌ಗೆ ಈಗಾಗಲೇ ದಾಖಲಾತಿ ಪರಿಶೀಲನೆ ಯಶಸ್ವಿಯಾಗಿದೆ ಎಂಬ ಸಂದೇಶ ಬಂದಿದ್ದರೆ ಸಾಕು. ಸದ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ ಬರೋಬ್ಬರಿ ಶೇ. 60ರಷ್ಟು ಅಂದರೆ ಸುಮಾರು 40 ಲಕ್ಷಕ್ಕೂ ಅಧಿಕ ಮಂದಿಯ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಇನ್ನು ಯಾರೆಲ್ಲಾ ಇದುವರೆಗೆ ಗೃಹಜ್ಯೋತಿ ದಾಖಲೆ ಪರಿಶೀಲನೆ ಮಾಡಿಸಿಲ್ಲವೋ, ಅಂತಹವರಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ನಿಮ್ಮ ಮನೆಗೆ ಬೆಸ್ಕಾಂ ಸಿಬ್ಬಂದಿ ಬರದಿದ್ದರೆ, ಬಿಲ್ ನೀಡುವವರ ಬಳಿ ಅಥವಾ ಹತ್ತಿರದ ಗ್ರಾಮ ಪಂಚಾಯತಿ ಹಾಗೂ ಅಧಿಕೃತ ಕಚೇರಿಗಳಲ್ಲಿ ವಿಚಾರಿಸಿ ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸಿ.

About The Author