ಶಾಸಕ ಜಿ.ಟಿ.ದೇವೇಗೌಡ ಅವರು ಇತ್ತೀಚೆಗೆ ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಅವಕಾಶ ನೀಡಿದರೆ, ಸಹಕಾರ ಸಂಘಗಳ ಬಾಗಿಲು ಮುಚ್ಚಬೇಕಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆ ಖಂಡಿಸಿ ಕರ್ನಾಟಕ ಭೀಮ್ ಸೇನೆ ಮುಖಂಡರು ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಅಧಿವೇಶನದಲ್ಲಿ ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮತ್ತು ರೋಸ್ಟರ್ ಪದ್ಧತಿಯಲ್ಲಿ ಅಧಿಕಾರ ಹಂಚಿಕೆ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ್ದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿ, ದಲಿತರನ್ನು ಅವಮಾನಿಸಿದ್ದಾರೆ. ಇವರ ಈ ದುರಹಂಕಾರದ ನಡವಳಿಕೆಯನ್ನು ಇಡೀ ದಲಿತ ಸಮೂಹ ಖಂಡಿಸುತ್ತದೆ ಎಂದು ಕಿಡಿ ಕಾರಿದರು.
ಈ ಹೇಳಿಕೆಯು ಅವರ ನಡವಳಿಕೆ ಪುಷ್ಟಿಕರಿಸುತ್ತಿದೆ. ಜಿ.ಟಿ.ದೇವೇಗೌಡ ಮತ್ತು ಅವರ ಅಳಿಯ ನಡೆಸಿರುವ ಭೂ ಹಗರಣಗಳ ಬಗ್ಗೆ ಈಗಾಗಲೇ ಜನರಿಗೆ ಗೊತ್ತಿದೆ. ಇಂತಹ ಕ್ರಿಮಿನಲ್ ಪ್ರಕರಣ ಹೊಂದಿರುವವರು ದಲಿತರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ಇವರ ಸದಸ್ಯತ್ವವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ