ಜಿಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಜಿ.ಟಿ ದೇವೇಗೌಡ ಅವರು ಇತ್ತೀಚೆಗೆ ಪಕ್ಷದ ಚಟುವಟಿಕೆಯಿಂದ ದೂರವಿದ್ದಾರೆ. ಜಿಟಿಡಿ ಅವರ ಈ ನಡೆಗೆ ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ನಮ್ಮ ತಂದೆಗೆ ಜೆಡಿಎಸ್ ಪಕ್ಷದ ನಿರ್ಧಾರಗಳ ಬಗ್ಗೆ ಕೆಲವು ಅಸಮಾಧಾನಗಳಿವೆ. ಈ ಕಾರಣದಿಂದ ಅವರು ಕೆಲವು ಕಾಲದಿಂದ ದೂರ ಉಳಿದಿದ್ದಾರೆ. ಆದರೆ ಅವರನ್ನು ಮನವೊಲಿಸುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ. ಇದು ನನ್ನ ವೈಯಕ್ತಿಕ ವಿಷಯ ಅಲ್ಲದ ಕಾರಣ ಹೆಚ್ಚಿನ ಮಾತನಾಡಲ್ಲ ಎಂದಿದ್ದಾರೆ.
ನಾನು ಜೆಡಿಎಸ್‌ನಲ್ಲಿದ್ದೇನೆ ಮತ್ತು ಜೆಡಿಎಸ್‌ನಲ್ಲಿಯೇ ಮುಂದುವರೆಯುತ್ತೇನೆ. ಕಾಂಗ್ರೆಸ್ ಕಡೆಗೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಜನರು ನನ್ನನ್ನು ಜೆಡಿಎಸ್‌ನಿಂದ ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ. ನಮ್ಮ ನಾಯಕ ಎಚ್.ಡಿ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಜೆಡಿಎಸ್ ಭವಿಷ್ಯದ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಬಳಿಕ ಪಕ್ಷವನ್ನು ನಿಖಿಲ್ ಮುಂದುವರೆಸಲು ಶಕ್ತಿ ಹೊಂದಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಬೇಕೆಂಬ ಉದ್ದೇಶ ಪಕ್ಷದ ಶಾಸಕರಲ್ಲಿದೆ. ನಿಖಿಲ್ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವುದು ನಮ್ಮ ಕನಸು ಎಂದು ಹರೀಶ್ ಗೌಡ ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ