Political News: ಇಂದು ಗುರುಪೂರ್ಣಿಮೆ ನಿಮಿತ್ತವಾಗಿ ಎಲ್ಲರೂ ತಮ್ಮ ತಂದೆ ತಾಯಿ, ಗುರುಗಳನ್ನು ನೆನಪಿಸುತ್ತಿದ್ದಾರೆ. ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತಮ್ಮ ಗುರುಗಳನ್ನು ನೆನೆದು ಧನ್ಯವಾದ ಅರ್ಪಿಸಿದ್ದಾರೆ.
ಬಾಲ್ಯದಲ್ಲಿ ಶಾಲೆಯ ಮೆಟ್ಟಿಲು ಹತ್ತದ ನನ್ನನ್ನು ಶಿಕ್ಷಕರೊಬ್ಬರು ಕೈಹಿಡಿದು ತರಗತಿಯಲ್ಲಿ ಕೂರಿಸಿ, ಜ್ಞಾನದ ಜೊತೆಗೆ ಬದುಕಿನ ಪಾಠ ಕಲಿಸದೆ ಇದ್ದಿದ್ದರೆ ನಾನಿಂದು ಇಲ್ಲಿಗೆ ತಲುಪಲು ಸಾಧ್ಯವೇ ಇರುತ್ತಿರಲಿಲ್ಲ. ಅಂದು ರಾಜಪ್ಪ ಮೇಸ್ಟ್ರು ನನ್ನೆಡೆಗೆ ತೋರಿದ ಕಾಳಜಿ ನನ್ನ ಬದುಕನ್ನೇ ಬದಲಿಸಿತು ಎಂದು ತಮ್ಮ ರಾಜಪ್ಪ ಮೇಷ್ಟ್ರನ್ನು ಸಿದ್ದರಾಮಯ್ಯ ನೆನೆದಿದ್ದಾರೆ.
ಶಿಕ್ಷಣ, ಹೋರಾಟ, ರಾಜಕೀಯ ನಿಲುವು, ಸಾಮಾಜಿಕ ಕಾಳಜಿ, ಸೈದ್ಧಾಂತಿಕ ಬದ್ಧತೆಯ ಅರಿವನ್ನು ಕೆಲವರು ತಿಳಿಹೇಳಿದರೆ, ಹಲವರನ್ನು ನೋಡಿ ಕಲಿತಿದ್ದೇನೆ. ಈ ಎಲ್ಲರೂ ನನಗೆ ಗುರು ಸಮಾನರೆ. ಗುರುಪೂರ್ಣಿಮೆಯ ಈ ಪವಿತ್ರ ದಿನದಂದು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಮೌಲ್ಯಗಳನ್ನು ಧಾರೆಯೆರೆದು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪ್ರತಿಯೊಬ್ಬ ಗುರುವನ್ನು ನೆನೆದು, ನಮಿಸೋಣ ಎಂದು ಸಿದ್ದರಾಮಯ್ಯ ಗುರುಗಳಿಗೆಲ್ಲ ಧನ್ಯವಾದ ಅರ್ಪಿಸಿದ್ದಾರೆ.




