600ಕ್ಕೂ ಹೆಚ್ಚು ವಿಶೇಷಚೇತನರ ಜೊತೆ ಬಿಡದಿ ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಹೆಚ್.ಡಿ.ಕುಮಾರಸ್ವಾಮಿ

Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಬಿಡದಿಯ ಫಾರ್ಮ್ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಪ್ರತೀ ವರ್ಷ ಅವರು ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸುತ್ತಾರೆ. ಆದರೆ ಈ ಸಲದ ಸಂಕ್ರಾಂತಿ ವಿಶೇಷವಾಗಿರುವುದಕ್ಕೆ ಕಾರಣ, ಅವರು 600ಕ್ಕೂ ಹೆಚ್ಚು ವಿಶೇಷ ಚೇತನರ ಜತೆ ಹಬ್ಬ ಆಚರಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬೆಸ್ಕಾಂ ಸೇರಿ ಕೆಪಿಟಿಸಿಎಲ್ ನ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ತಮ್ಮ ಕುಟುಂಬಗಳ ಸಮೇತ ಬಿಡದಿ ತೋಟದ ಮನೆಗೆ ಬಂದು ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದ ವಿಶೇಷ ಸಂದರ್ಭವಿದು.

ನನ್ನದು ಧನ್ಯತೆಯ ಭಾವ. ಭಗವಂತ ಕೊಟ್ಟ ಸಣ್ಣ ಅವಕಾಶದಲ್ಲಿ ಇಷ್ಟು ಜನ ವಿಕಲಚೇತನ ಕುಟುಂಬಗಳಿಗೆ ನೆರವಾಗುವ ಅವಕಾಶ ನನಗೆ ಸಿಕ್ಕಿತ್ತು. ಇವರ ಸೇವೆಯನ್ನು ಈಶ ಸೇವೆ ಎಂದೇ ನಂಬಿದ್ದೇನೆ. ಸತತ 7ನೇ ವರ್ಷವೂ ಇವರೆಲ್ಲರೂ ನನ್ನ ಜತೆಯಲ್ಲಿ ಸುಗ್ಗಿ ಹಬ್ಬ ಆಚರಿಸಿದರು.

ಸುಖ ಸಂತೋಷ, ನೆಮ್ಮದಿ ಸಮೃದ್ಧಿಯ ಪ್ರತೀಕವಾದ ಸಂಕ್ರಾಂತಿಯ ಎಳ್ಳುಬೆಲ್ಲದಂತೆ, ಈ ಪುಣ್ಯದಿನ ಪಥ ಬದಲಿಸುತ್ತಿರುವ ಆ ಸೂರ್ಯದೇವನ ಕೃಪೆಯಿಂದ ಇವರೆಲ್ಲರೂ ಸಮಾಜದಲ್ಲಿ ಇನ್ನೂ ಉತ್ತರೋತ್ತರವಾಗಿ ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ. ಈ ಕುಟುಂಬಗಳ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ಆಭಾರಿ ಆಗಿದ್ದೇನೆ ಎಂದು ಹೆಚ್ಡಿಕೆ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

About The Author