ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ತಪ್ಪು ಸಾಬೀತಾದರೆ ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಸವಾಲು ಹಾಕಿರುವ ಅವರು, ಮೃತರು ಬೇಟೆಗಾರರು ಎಂಬುದು ದೃಢಪಟ್ಟರೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ಉತ್ತರಿಸಿದ ಸಚಿವರು, ಸದ್ಯ ಈ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಇನ್ನೂ ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ ಎಂದರು. ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು ಮತ್ತು ಅದರಿಂದ ತೃಪ್ತಿಯಾಗದಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಇನ್ನು ಅರಣ್ಯ ಸಿಬ್ಬಂದಿ ಯಾವುದೇ ದ್ವೇಷದಿಂದ ಗುಂಡು ಹಾರಿಸಿಲ್ಲ, ಆತ್ಮರಕ್ಷಣೆಗಾಗಿ ಮಾತ್ರ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಗಸ್ಟ್ 14ರಂದು ರಾತ್ರಿ 8 ಗಂಟೆಗೆ ಅಕ್ರಮ ಬೇಟೆಯ ಕುರಿತು ಮಾಹಿತಿ ಬಂದಿತ್ತು. ಶಂಕಿತರನ್ನು ಪತ್ತೆಹಚ್ಚಲು ಅರಣ್ಯಕ್ಕೆ ತೆರಳಿದ ಸಿಬ್ಬಂದಿಗೆ ಬೆಳಗಿನ ಜಾವ 5 ಗಂಟೆಗೆ ಶಂಕಿತರು ಕಾಣಿಸಿಕೊಂಡಿದ್ದಾರೆ. ಶಂಕಿತರು ದಾಳಿಗೆ ಮುಂದಾದ ಕಾರಣ ಆತ್ಮರಕ್ಷಣೆಗಾಗಿ ಸಿಬ್ಬಂದಿ ಸ್ಲೈಡ್ ಆ್ಯಕ್ಷನ್ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ ಎಂದು ವಿವರಿಸಿದರು. ಘಟನಾ ಸ್ಥಳದಿಂದ ಎರಡು ನಾಡ ಬಂದೂಕುಗಳು, ಅಡುಗೆ ಪಾತ್ರೆಗಳು, ಚಾಕು ಹಾಗೂ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮೃತಪಟ್ಟ ಮೂವರ ಪೈಕಿ ಇಬ್ಬರ ವಿರುದ್ಧ ಈಗಾಗಲೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣಗಳಿವೆ ಎಂದು ಸಚಿವರು ತಿಳಿಸಿದರು. ಆದರೆ, ಮೃತರು ಜಾನುವಾರುಗಳನ್ನು ಹುಡುಕಿಕೊಂಡು ಹೋಗಿದ್ದರು ಎಂಬ ವಾದವನ್ನು ತಳ್ಳಿಹಾಕಿದ ಅವರು, ಬೇಟೆಗಾರರೆಂದು ಸಾಬೀತಾದರೆ ಪರಿಹಾರವಿಲ್ಲ ಎಂದಿದ್ದಾರೆ. ಇತ್ತ ಪ್ರತಿಪಕ್ಷಗಳು ನ್ಯಾಯಾಂಗ ತನಿಖೆ ಹಾಗೂ ತಲಾ 1 ಕೋಟಿ ಪರಿಹಾರಕ್ಕೆ ಪಟ್ಟು ಹಿಡಿದು ಸದನದಲ್ಲಿ ಗದ್ದಲವೆಬ್ಬಿಸಿವೆ.
ಎಸ್ ‘ಮೂರು ದಿನಗಳಲ್ಲಿ ಬರಲಿರುವ ತನಿಖಾ ವರದಿಯು ಈ ಎನ್ಕೌಂಟರ್ ಪ್ರಕರಣದ ಅಸಲಿ ಸತ್ಯವನ್ನು ಹೊರಹಾಕಲಿದೆ ಅಂತಾನೆ ಹೇಳಬಹುದು.




