Hubli News: ಫ್ಲೈಓವರ್ ಕಾಮಗಾರಿ ವೇಳೆ ವೃದ್ಧೆ ಮೇಲೆ ಬಿದ್ದ ಕಬ್ಬಿಣದ ರಾಡ್

Hubli News: ಹುಬ್ಬಳ್ಳಿಯ ಹೊಸೂರು ವೃತ್ತದ ಫ್ಲೈಓವರ್ ಕಾಮಗಾರಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಕಾಮಗಾರಿ ಸ್ಥಳದ ಸಮೀಪ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯ ತಲೆಯ ಮೇಲೆ ಬೃಹತ್ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಹುಬ್ಬಳ್ಳಿಯ ಹೊಸೂರು ವೃತ್ತದ ಕೆನೆರಾ ಹೋಟೆಲ್ ಮುಂಭಾಗದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಮತ್ತೊಮ್ಮೆ ಸಾರ್ವಜನಿಕರ ಸುರಕ್ಷತೆ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ನವನಗರದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದ ಯಶೋಧಾ ಜಾಧವ ಎಂಬ ವೃದ್ಧೆ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ವೇಳೆ ಮೇಲ್ಭಾಗದಿಂದ ಬೃಹತ್ ಕಬ್ಬಿಣದ ರಾಡ್ ತಲೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂದಲೇಳೆಯ ಅಂತರದಲ್ಲಿ ಜೀವಹಾನಿಯಿಂದ ಪಾರಾಗಿರುವ ವೃದ್ಧೆಯನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕೆಲಸ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಸಾರ್ವಜನಿಕರ ರಕ್ಷಣೆಗಾಗಿ ಅಗತ್ಯ ತಡೆಗೋಡೆಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳ ಕೊರತೆಯೇ ಈ ಅವಘಡಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಬಳಿಕ ಕೆಲ ಕಾರ್ಮಿಕರು ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕಳೆದ ವರ್ಷ ಇದೇ ಫ್ಲೈಓವರ್ ಕಾಮಗಾರಿ ವೇಳೆ ಎಎಸ್‌ಐ ನೇಮಿರಾಜ್ ದಯಣ್ಣವರ ಮೃತಪಟ್ಟಿದ್ದ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸದಿರುವಾಗ ಮತ್ತೊಂದು ಅವಘಡ ಸಂಭವಿಸಿರುವುದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಹಿಂದಿನ ದುರಂತದಿಂದಲೂ ಪಾಠ ಕಲಿಯದ ಕಾಮಗಾರಿ ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆ ಮಾಹಿತಿ ತಿಳಿದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ವಿದ್ಯಾನಗರ ಪೊಲೀಸರು ಗಾಯಾಳುವಿನ ಆರೋಗ್ಯ ವಿಚಾರಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

About The Author