ಹಾಸನ: ಚುನಾವಣಾ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರನ್ನು ವರ್ಗಾವಣೆ ಮಾಡಿದೆ.
ಅದ್ಯಾಕೋ ಏನೋ ಜಿಲ್ಲಾ ಉಸ್ತುವಾರಿ ಸಚಿವರಾಗಿ ರೇವಣ್ಣ ನೇಮಕವಾದಾಗಿನಿಂದಲೂ ಹಾಸನದಲ್ಲಿ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗುತ್ತಿದೆ. ಇದಕ್ಕೆ ಇದೀಗ ಜಿಲ್ಲೆಯ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಟ್ರಾನ್ಸ್ ಫರ್ ಆಗಿರೋದೇ ಸಾಕ್ಷಿಯಾಗಿದೆ.
ಹಾಸನದಲ್ಲಿ ಈ ಹಿಂದೆ ಡಿಸಿ ಆಗಿ ಕೆಲಸ ಮಾಡುತ್ತಿದ್ದ ಅಕ್ರಂ ಪಾಷ ಅವರನ್ನು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದ್ದು, 2 ತಿಂಗಳ ಹಿಂದಷ್ಟೇ ಹಾಸನದ ಡಿಸಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರವರನ್ನು ಎತ್ತಂಗಡಿ ಮಾಡಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಡಿಸಿ ಆಹಿದ್ದ ಅಕ್ರಂ ಪಾಷ ಹಾಸನದ ಸ್ಥಳೀಯರು ಎಂಬ ಕಾರಣಕ್ಕೆ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.ಹೀಗಾಗಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕ ಮೇರಿಯವರನ್ನ ಹಾಸನಕ್ಕೆ ವರ್ಗಾಯಿಸಲಾಗಿತ್ತು. ಆದ್ರೆ ಇದೀಗ ಮತ್ತೆ ಅಕ್ರಂ ಪಾಷರನ್ನು ಹಾಸನ ಡಿಸಿಯಾಗಿ ನೇಮಕ ಮಾಡಲಾಗಿದೆ.
ಎಲ್ಲರೂ ಗಮನಿಸಿರೋ ಹಾಗೆ ಹಾಸನಕ್ಕೆ ನೇಮಕವಾದ ಡಿಸಿಗಳು ರಾಜ್ಯದ ಇತರೆ ಜಿಲ್ಲಾಧಿಕಾರಿಗಳಿಗಿಂತ ಹೆಚ್ಚು ಸುದ್ದಿಯಲ್ಲಿರ್ತಾರೆ. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ರೇವಣ್ಣ ಹೋದ ಮೇಲಂತೂ ಇದು ಹೆಚ್ಚಾಗುತ್ತಿದೆ. ಈ ಹಿಂದೆ ಇಲ್ಲಿನ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಕೂಡ ಉಸ್ತುವಾರಿ ಸಚಿವರೊಂದಿಗಿನ ಶೀತಲ ಸಮರಕ್ಕೆ ಹೆಚ್ಚು ಸುದ್ದಿಯಾಗಿದ್ರು.
ಇನ್ನು ಬರ ನಿರ್ವಹಣೆ ಕುರಿತಾಗಿ ಮಾಧ್ಯಮದೆದುರು ಮಾತನಾಡುತ್ತಿದ್ದ ಸಚಿವ ರೇವಣ್ಣ, ಬರ ನಿರ್ವಣೆ ಸರಿಯಾಗಿ ಆಗದೆ, ಹಾವೇರಿಯಂತೆ ಇಲ್ಲೂ ಗೋಲಿಬಾರ್ ಆದರೆ ಅದಕ್ಕೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮೇರಿ ನೇರ ಹೊಣೆ ಅಂತ ಸಚಿವ ರೇವಣ್ಣ ಎಚ್ಚರಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿ ಪ್ರಿಯಾಂಕಾ ಮೇರಿ, ಜಿಲ್ಲೆಯಲ್ಲಿ ಬರ ನಿರ್ವಹಣೆ ಕೆಲಸ ಸರ್ಪಕವಾಗಿ ನಡೆಯುತ್ತಿದೆ. ಬರ ಪರಿಹಾರ ಅನುದಾನ ಕೂಡ ಸರಿಯಾದ ಸಮಯಕ್ಕೆ ಬಿಡುಗಡೆಯಾಗ್ತಿದೆ ಅಂತ ತಿರುಗೇಟು ನೀಡಿದ್ರು.
ಇನ್ನು ವರ್ಗಾವಣೆ ವಿಚಾರಕ್ಕೆ ಬಂದ್ರೆ ಉಸ್ತುವಾರಿ ಸಚಿವ ರೇವಣ್ಣ ಆಜ್ಞೆಯೇ ಅತಿ ಮುಖ್ಯ ಅನ್ನೋದು ಜಗಜ್ಜಾಹೀರಾಗಿದೆ. ಸಚಿವರ ಗಮನಕ್ಕೆ ಬರದೆ ಯಾವುದೇ ಇಲಾಖೆಯ ಯಾವ ಫೈಲ್ ಕೂಡ ಅತ್ತಿತ್ತ ಅಲುಗಾಡೋದೂ ಇಲ್ಲ. ಅಧಿಕಾರಿಗಳೂ ಸಹ ರೇವಣ್ಣ ಗಮನಕ್ಕೆ ತಾರದೆ ಯಾವುದೇ ನಿರ್ಧಾರ ಮಾಡೋಲ್ಲ. ಹೀಗಾಗಿಯೇ ರೇವಣ್ಣ ತಮ್ಮ ಆಪ್ತರು ಮತ್ತು ನಂಬಿಕಸ್ತರು ಅಧಿಕಾರಿಗಳನ್ನ ನೇಮಿಸಿಕೊಂಡು ಅವರಿಂದ ಕೆಲಸ ತೆಗೀತಾರೆ.
ಒಟ್ಟಾರೆ ಡಿಸಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದ ಕಾರಣಗಳು ಸಾಕಷ್ಟಿರಬಹುದು. ಆದ್ರೆ ಹೀಗೆ ವರ್ಷಕ್ಕೆರಡು ಬಾರಿ ಅತ್ಯಂತ ಜವಾಬ್ದಾರಿ ಹುದ್ದೆಯಲ್ಲಿರೋ ಅಧಿಕಾರಿಗಳನ್ನ ಯದ್ವಾತದ್ವಾ ವರ್ಗಾವಣೆ ಮಾಡುತ್ತಿದ್ರೆ ಆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತೆ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸನ್ಯಾಸಿಯಾಗಲು ಹೊರಟವರು ಕೇಂದ್ರ ಮಂತ್ರಿಯಾಗಿದು ಹೇಗೆ ಗೊತ್ತಾ…? ಮಿಸ್ ಮಾಡದೇ ಈ ವಿಡಿಯೋ ನೋಡಿ