2028ಕ್ಕೆ HDK ಸರ್ಕಾರ ಬರುತ್ತಾ? ಚರ್ಚೆ ಹೆಚ್ಚಿಸಿದ ಹೊಸ ಘೋಷಣೆ!

2028ರ ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗಿನಿಂದಲೇ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ‘ಪರಿಶ್ರಮಕ್ಕೆ ತಕ್ಕ ಪ್ರತಿಫಲ – 2028ಕ್ಕೆ ಇದೇ ನನ್ನ ಪ್ರತಿಜ್ಞೆ’ ಎಂಬ ಹೊಸ ಘೋಷವಾಕ್ಯದೊಂದಿಗೆ ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ಅವರು, 2028ರಲ್ಲಿ ಜನರು ತಮ್ಮ ಕೈ ಹಿಡಿಯಲಿದ್ದು ರಾಜ್ಯದಲ್ಲಿ ಜೆಡಿಎಸ್-ಮೈತ್ರಿ ಸರ್ಕಾರ ರಚನೆಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಯುವಕರೊಂದಿಗೆ ನೇರ ಸಂವಾದ ನಡೆಸಿದ ಕುಮಾರಸ್ವಾಮಿ, ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿರುವ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ವಿವರಿಸಿದರು. ವಿಜಯದಶಮಿಯ ಸಂದರ್ಭದಲ್ಲಿ ಮಾತನಾಡುತ್ತಾ, ‘ಪ್ರಾಮಾಣಿಕವಾಗಿ ನಾನು ನೋಡಿಕೊಳ್ಳುತ್ತೇನೆ, ಇದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಿ’ ಎಂದು ಯುವಕರಿಗೆ ಧೈರ್ಯ ತುಂಬಿದ ಅವರು, ನಿರುದ್ಯೋಗ ನಿವಾರಣೆಗೆ ಒಟ್ಟು ಎಂಟು ಯೋಜನೆಗಳನ್ನು ರೂಪಿಸಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನನ್ನ ಮೊದಲ ಕಾರ್ಯಕ್ರಮ ಯುವಕರ ಉದ್ಯೋಗದ ಬಗ್ಗೆ ಇರಲಿದೆ ಎಂದ ಹೆಚ್‌ಡಿಕೆ, ಒಂದು ಕುಟುಂಬಕ್ಕೆ ಕಡ್ಡಾಯವಾಗಿ ಒಂದು ಉದ್ಯೋಗ ಸಿಗಬೇಕು ಎಂದು ಪ್ರತಿಪಾದಿಸಿದರು. ಉದ್ಯೋಗದ ಅವಧಿಯನ್ನು 10 ರಿಂದ 15 ವರ್ಷಕ್ಕೆ ಇಳಿಸಿ, ಆ ಮೂಲಕ ಹೊಸಬರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ವಿನೂತನ ಯೋಜನೆಯನ್ನು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಯುವಕರು ತಮ್ಮ ಅಭಿಪ್ರಾಯ ಅಥವಾ ಫೀಡ್‌ಬ್ಯಾಕ್ ನೀಡುವಂತೆ ಮನವಿ ಮಾಡಿದರು.

ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ ಎಂಬ ಟೀಕೆಗಳಿಗೆ ತಿರುಗೇಟು ನೀಡಿರುವ ಅವರು, ತನಗೆ ದೇವರ ಮೇಲೆ ಹಾಗೂ ಜನರ ಮೇಲೆ ದೃಢ ನಂಬಿಕೆಯಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಹೊಸ ಘೋಷವಾಕ್ಯ ಹಾಗೂ ಯುವ ಅಸ್ತ್ರದೊಂದಿಗೆ ಎಚ್‌ಡಿಕೆ 2028ರ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

About The Author