ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್ ರಾಥೋಡ್ ರಾಷ್ಟ್ರೀಯ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದಾರೆ. ಹೌದು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ಮುಗಿಬಿದ್ದಿವೆ.
ಹೌದು ‘ಭೌಗೋಳಿಕ ಸಾಮಿಪ್ಯವನ್ನು ಉಲ್ಲೇಖಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮದನ್ ರಾಥೋಡ್, ‘ಒಂದು ವೇಳೆ ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನಾವು ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ, ಏಕೆಂದರೆ ಅದು ನಮ್ಮ ನೆರೆಯ ರಾಷ್ಟ್ರ. ಆದರೆ ನಮ್ಮದೇ ಆಂತರಿಕ ವಿಷಯಗಳಿಗೆ ಬಂದಾಗ ನಾವು ಭಾರತದ ಪರವಾಗಿ ನಿಲ್ಲುತ್ತೇವೆ’ ಎಂದು ಹೇಳಿದ್ದರು. ಈ ಹೇಳಿಕೆ ಈಗ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಬಿಜೆಪಿ ನಾಯಕನ ಈ ಮಾತಿಗೆ ಆಪ್ ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿವೆ. ರಾಥೋಡ್ ಅವರನ್ನು ‘ದೇಶದ್ರೋಹಿ’ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರೆ ಶಾಮಾ ಮೊಹಮ್ಮದ್, ನಮ್ಮ ಸೈನಿಕರನ್ನು ಕೊಲ್ಲುವ ಭಯೋತ್ಪಾದಕ ರಾಷ್ಟ್ರದ ಮೇಲಿನ ಬಿಜೆಪಿಯ ಪ್ರೀತಿ ಮತ್ತೊಮ್ಮೆ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ. ಇತ್ತ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ವಿಡಿಯೋ ಹಂಚಿಕೊಂಡು, ಪ್ರಧಾನಿ ಮೋದಿ ಅವರ ರಾಷ್ಟ್ರೀಯತೆ ಎಲ್ಲಿದೆ ಎಂದು ಕಟುವಾಗಿ ಪ್ರಶ್ನಿಸಿದೆ.
ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿರಂತರವಾಗಿ ಎದುರಿಸುತ್ತಿರುವ ಭಾರತದ ಸಂದರ್ಭದಲ್ಲಿ, ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ನೆರೆಯ ಶತ್ರು ರಾಷ್ಟ್ರದ ಪರವಾಗಿ ಬ್ಯಾಟಿಂಗ್ ಬೀಸಿರುವುದು ಸದ್ಯ ರಾಜಕೀಯವಾಗಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ ಎಂದೇ ಹೇಳಬಹುದು.




