ಮುಡಾ ಪ್ರಕರಣ ಸಿಬಿಐಗೆ ಅರ್ಜಿ ವಿಚಾರಣೆ ಪೂರ್ಣ; ಆದೇಶ ಕಾಯ್ದಿರಿಸಿದ ಹೈಕೋರ್ಟ್

Dharwad News: ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂಬ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಧಾರವಾಡ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿದೆ.

ನ್ಯಾ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಸೋಮವಾರ ಬೆಳಗ್ಗೆಯಿಂದಲೇ ವಿಚಾರಣೆ ನಡೆಸಿತು. ಸತತ ಆರು ಗಂಟೆಗಳ ಕಾಲ ವಾದ ಪ್ರತಿವಾದಿಗಳನ್ನು ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

ಸಾಮಾಜಿಕ ಹೋರಾಟಗಾರ ಸ್ನೇಹ ಮಯಿ ಕೃಷ್ಣ ಪರ ವಾದ ಮಂಡಿಸಿದ ಸುಪ್ರೀಂ ಕೋಟ್೯ ಹಿರಿಯ ವಕೀಲ ಮಣೀಂದರ ಸಿಂಗ್, ‘ಮುಡಾ ಕಚೇರಿಯಿಂದ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರ ತನಿಖೆ ನಡೆಸುತ್ತಿದೆ ಎಂಬುದು ಒಪ್ಪಲಾಗದು. ಹೀಗಾಗಿ ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂದರು.

ವಿಚಾರಣೆ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹ ಮಯಿ ಕೃಷ್ಣ, ‘ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಮಾಡಿರುವ ತಪ್ಪಿಗೆ ಸರಿಯಾದ ಶಿಕ್ಷೆ ಆಗಬೇಕಿದೆ. ಅವರು‌ ಲೋಕಾಯುಕ್ತ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದರಿಂದ ನಿಷ್ಪಕ್ಷಪಾತವಾದ ತನಿಖೆ ಅಸಾಧ್ಯ’ ಎಂದರು.

ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಸಂಬಳ ತಿಂದು ಪ್ರಭಾವಿ ರಾಜಕಾರಣಿಗಳ ಪರ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ದ ಕೂಡ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇನೆ. ಇದು ದೇಶ ದ್ರೋಹದ ಕೆಲಸವಾಗಿದೆ. ಇದನ್ನು ರಾಜ್ಯದ ಜನರು ತಿಳಿಯಬೇಕು. ನ್ಯಾಯಾಲಯ ಈ ಪ್ರಕರಣವನ್ನು ಖಂಡಿತವಾಗಿಯೂ ಸಿಬಿಐಗೆ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ನೇಹಮಯಿ ಕೃಷ್ಣ ಪರವಾಗಿ ಮಣೀಂದರ ಸಿಂಗ್, ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ ಮನು ಸಿಂಗ್ವಿ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ಪ್ರೊ.ರವಿವರ್ಮಕುಮಾರ, ದೇವರಾಜ ಪರ ದುಷ್ಯಂತ ದವೆ, ರಾಜ್ಯ ಸರಕಾರದ ಪರ ಕಪಿಲ ಸಿಬಲ್ ವಾದ ಮಂಡಿಸಿದರು.

About The Author