Political News: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಹಣ ಪ್ರತೀ ತಿಂಗಳು ಫಲಾನುಭವಿಗಳ ಕೈ ಸೇರುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ನವೆಂಬರ್ ತಿಂಗಳ ಹಣ ಸಿಕ್ಕಿದೆ. ಹಾಗಾಗಿ ಯೋಜನೆಯ ಹಣ ಸರಿಯಾಗಿ ಕೈ ಸೇರುತ್ತಿಲ್ಲವೆಂದು ಹಲವರು ಬೇಸರ ಹೊರಹಾಕಿದ್ದಾರೆ. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದ ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಇನ್ಮುಂದೆ ಗೃಹಲಕ್ಷ್ಮೀ ಹಣಕ್ಕಾಗಿ ಕಾಯೋದು ಬೇಡ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೆದುರು ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ನವೆಂಬರ್ ತಿಂಗಳ ಗೃಹಲಕ್ಷ್ಮೀ ಹಣವನ್ನು ಈಗಾಗಲೇ ಅಕೌಂಟ್‌ಗೆ ಹಾಕಲಾಗಿದೆ. ಡಿಸೆಂಬರ್ ಮತ್ತು ಜನವರಿ ಹಣವನ್ನು ಆದಷ್ಟು ಬೇಗ ಹಾಕಲಾಗುತ್ತದೆ. ಈಗಾಗಲೇ ಬಿಲ್ಲಿಂಗ್ ಶುರು ಮಾಡಲಾಗಿದೆ. ಎರಡು ತಿಂಗಳ ಹಣ ಆದಷ್ಟು ಬೇಗ ಫಲಾನುಭವಿಗಳ ಅಕೌಂಟ್‌ಗೆ ತಲುಪಲಿದೆ ಎಂದಿದ್ದಾರೆ.
ಅಲ್ಲದೇ ಈ ಯೋಜನೆ ಇರುವುದೇ ಬಡವರಿಗಾಗಿ, ಪಕ್ಷಾತೀತವಾಗಿ ಯೋಜನೆ ಜಾರಿ ಮಾಡಲಾಗಿದ್ದು, ಫಲಾನುಭವಿಗಳ ಅಕೌಂಟ್‌ಗೆ ಹಣ ಹೋಗುತ್ತಿದೆ. ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗಷ್ಟೇ ಹಣ ಸಂದಾಯ ಮಾಡಲಾಗುತ್ತಿದೆ ಅನ್ನೋದು ಶುದ್ಧ ಸುಳ್ಳು. ಇದೊಂದು ಆಧಾರ ರಹಿತ ಆರೋಪವೆಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಬರೀ ಚುನಾವಣೆಗಾಗಿ ಮಾಡಿದ್ದಲ್ಲ. ಚುನಾವಣೆ ಮುಗಿದ ಬಳಿಕವೂ ಅದನ್ನು ಮುಂದುವರಿಸಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆ ನಿರಂತರವಾಗಿ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಗೃಹಲಕ್ಷ್ಮೀ ಯೋಜನೆ ಇರಲಿದೆ ಎಂದು ಸಚಿವೆ ಹೇಳಿದರು.
ಈಗಾಗಲೇ ನವೆಂಬರ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ದುಡ್ಡು ಮಹಿಳೆಯರ ಅಕೌಂಟ್ ತಲುಪಿದ್ದು, ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳ ಹಣ ಬರುವುದು ಬಾಕಿ ಇದೆ. ಆದಷ್ಟು ಬೇಗ ಈ ಹಣವನ್ನು ನೀಡಬೇಕು ಎಂದು, ಯೋಜನೆಯ ಹಣವನ್ನೇ ನಂಬಿ ಕುಳಿತಿರುವ ಹಲವು ಮಹಿಳೆಯರು ಮನವಿ ಮಾಡಿದ್ದಾರೆ.




