Political News: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆಂದು ಆರೋಪಿಸಲಾಗಿದ್ದು, ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧಕ್ಕೆ ನುಗ್ಗಿ ಸಿ.ಟಿ.ರವಿ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ನಂತರ ಪೊಲೀಸರು, ಸಿ.ಟಿ.ರವಿ ಅವರನ್ನು ಸುವರ್ಣ ಸೌಧದ ಒಂದು ಗೇಟ್ ಒಳಗೆ ಕಳುಹಿಸಿ ರಕ್ಷಿಸಿದ್ದಾರೆ. ಆದರೂ ಬಿಡದ ಬೆಂಬಲಿಗರು, ಹೊರಗೆ ಬಾ, ಹೊರಗೆ ಬಂದು ಮಾತನಾಡು ಎಂದು ಏಕವಚನದಲ್ಲೇ ಮಾತನಾಡಿದ್ದಾರೆ. ಅಲ್ಲದೇ, ಪೊಲೀಸರಿಗೆ ನಮ್ಮನ್ನು ಒಳಗೆ ಹೋಗಲು ಬಿಡಿ ಎಂದು ದಾಂಧಲೆ ಮಾಡಿದ್ದಾರೆ.
ಇದಕ್ಕೆ ಒಳಗಿನಿಂದಲೇ ಪೊಲೀಸರಿಗೆ ಉತ್ತರಿಸಿದ ಸಿ.ಟಿ.ರವಿ ಏನು ಮಾಡ್ತಾರೋ ಮಾಡಲಿ, ಅವರನ್ನು ಒಳಗೆ ಬಿಡಿ ಎಂದಿದ್ದಾರೆ. ಅತ್ತಕಡೆ ಹೆಬ್ಬಾಳ್ಕರ್ ಬೆಬಂಲಿಗರು ಸಿ.ಟಿ.ರವಿ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದು, ಇತ್ತಕಡೆ ಪೊಲೀಸರು ರವಿ ಅವರನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಬಳಿಕ ಮಾಜಿ ಸಚಿವ, ಅಶ್ವತ್ ನಾರಾಯಣ್ ಸ್ಥಳಕ್ಕೆ ಆಗಮಿಸಿ, ಇದು ವಿಧಾನಸೌಧವೋ ಏನಿದು..? ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೂ ಕೂಡ ಬೆಂಬಲಿಗರು ಗುಲ್ಲೆಬ್ಬಿಸಿ, ಬೊಬ್ಬೆ ಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ.