News: ಸದ್ಯ ದೇಶದಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಇನ್ನೂ ಕೆಲ ದಿನಗಳ ಕಾಲ ಗಣಪ ನಮ್ಮೊಂದಿಗಿರುವ ಕಾರಣಕ್ಕೆ, ಗಣೇಶ ಚತುರ್ಥಿ ಸಂಭ್ರಮ ಹೆಚ್ಚಾಗಿದೆ.
ಸಾಮಾನ್ಯವಾಗಿ ಜನ ಗಣೇಶನಿಗೆ ಮೋದಕ, ಪಂಚಕಜ್ಜಾಯ, ಲಾಡು, ಚಕ್ಕುಲಿ, ಕರ್ಚಿಕಾಯಿ ಇತ್ಯಾದಿಗಳನ್ನು ನೈವೇದ್ಯಕ್ಕೆ ಇಡುತ್ತಾರೆ. ಆದರೆ ಕೊಪ್ಪಳ, ಹುಬ್ಬಳ್ಳಿ ಸೇರಿ ಕೆಲವು ಕಡೆ ಗಣೇಶನಿಗೆ ನಾನ್‌ವೆಜ್ ಊಟವನ್ನು ನೈವೇದ್ಯ ಮಾಡುತ್ತಾರೆ. ಮಟನ್, ಚಿಕನ್ ಖಾದ್ಯಗಳನ್ನು ಗಣೇಶನಿಗೆ ಅರ್ಪಿಸಿ, ಪೂಜೆ ಮಾಡಲಾಗುತ್ತದೆ.
ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ ಅಂತೆ. ಶ್ರಾವಣ ಮಾಸ ಶುರುವಾದಾಗ, ಈ ಜನ ಕಟ್ಟುನಿಟ್ಟಾಗಿ ಶ್ರಾವಣ ಮಾಸ ಆಚರಣೆ ಮಾಡುತ್ತಾರೆ. ಶುದ್ಧಸಸ್ಯಾಹಾರವನ್ನೇ ಸೇವಿಸುತ್ತಾರೆ. ಮೊಟ್ಟೆ, ಮದ್ಯ, ಮಾಂಸ ಸೇವಿಸುವುದಿಲ್ಲ. ಬಳಿಕ ಗಣಪತಿ ಹಬ್ಬದಂದು ಗಣೇಶನಿಗೆ ಮಾಂಸಾಹಾರ ನೈವೇದ್ಯ ಮಾಡಿ, ಅದನ್ನೇ ಸೇವಿಸುತ್ತಾರೆ.
ಎಲ್ಲ ಕುಟುಂಬಸ್ಥರೂ ಸೇರಿ, ನಾನ್‌ವೆಜ್ ಊಟ ಮಾಡುತ್ತಾರೆ. ಅದರಲ್ಲೂ ಹೊಸತಾಗಿ ಮಮದುವೆಯಾಗಿರುವ ಜೋಡಿ ಇದ್ದರೆ, ನಾನ್‌ವೆಜ್ ಊಟ ಇನ್ನೂ ಜೋರಾಗಿಯೇ ಇರುತ್ತದೆ. ಎಲ್ಲೆಡೆ ಗಣೇಶನಿಗೆ ಮೋದಕ, ಪಂಚಕಜ್ಜಾಯ, ಲಾಡು ಅರ್ಪಿಸಿ,, ಭಕ್ತಿ ಮೆರೆಯುತ್ತಾರೆ. ಅಲ್ಲದೇ, ನಾನ್‌ವೆಜ್ ದೂರದ ಮಾತು, ಈರುಳ್ಳಿ- ಬೆಳ್ಳುಳ್ಳಿ ಸೇವನೆಯನ್ನೂ ಮಾಡುವುದಿಲ್ಲ. ಅಂಥಾದ್ರಲ್ಲಿ ಇಲ್ಲಿ ನಾನ್‌ವೆಜ್ ಊಟವನ್ನು ನೈವೇದ್ಯಕ್ಕೆ ಇಡುವುದು ಕೊಂಚ ಅಪರೂಪದ ಭಕ್ತಿ ಎನ್ನಬಹುದು.