Political News: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾದ ಪೋಕ್ಸೊ ಕೇಸ್‌ನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು, ಮುಂದಿನ ವಿಚಾರಣೆವರೆಗೆ ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಆದೇಶ ಹೊರಡಿಸಿದೆ. ಜೊತೆಗೆ ವಿಚಾರಣೆಗೆ ಸಹಕರಿಸುವಂತೆ ಕೋರ್ಟ್ ಆದೇಶಿಸಿದೆ. ಇದರಿಂದಾಗಿ, ಸಿಐಡಿ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿ 82 ವರ್ಷದ ಯಡಿಯೂರಪ್ಪ ಅವರಿಗೆ ಸದ್ಯಮಟ್ಟಿಗೆ ರಿಲೀಫ್ ಸಿಕ್ಕಿದೆ.
ಪೋಕ್ಸೊ ಕೇಸ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪ ಪರ ವಕೀಲ ಸಿ.ವಿ. ನಾಗೇಶ್ ಅವರು ಹೈಕೋರ್ಟ್ಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ಹಾಗೂ ಇನ್ನೊಂದು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ದೂರುದಾರೆಗೆ ಬ್ಲ್ಯಾಕ್‌ಮೇಲ್ ಮಾಡುವುದೇ ಕೆಲಸವಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ. ಆಕೆಯ ವೃತ್ತಿಯೇ ಬೇರೆಯವರ ವಿರುದ್ಧ ಕೇಸ್ ದಾಖಲಿಸುವುದಾಗಿದೆ. ಇದುವರೆಗೆ ಮಹಿಳೆಯು ಸುಮಾರು 53 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಲ್ಲಿ ಭಾವನಾತ್ಮಕ ಅಂಶಗಳಿಗಿಂತ ವಾಸ್ತವಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ನಾಗೇಶ್ ಅವರು ವಾದ ಮಂಡಿಸಿದರು.
2024ರ ಫೆಬ್ರವರಿ 2ರಂದು ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿಎಸ್‌ವೈ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ದೇವೇಗೌಡರ ಕುಟುಂಬವನ್ನು ಮುಗಿಸಲು ಮುಂದಾಗಿದ್ರಿ. ಇದೀಗ 82 ವರ್ಷದ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಹಿಸಲು ಮುಂದಾಗಿದ್ದೀರಿ. ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ಅವರ ಕುಟುಂಬ ಮುಗಿಸಲು ಹೊರಟಿದ್ದೀರಿ. ಕಾಂಗ್ರೆಸ್ ನಿರ್ನಾಮ ಆಗೋದು ಪಕ್ಕಾ. ಫೆ.2ರಂದು ಘಟನೆಯಾಗಿದೆ. ನಾಲ್ಕು ತಿಂಗಳು ಏನು ಮಾಡಿದ್ರಿ ಎಂದು ಪ್ರಶ್ನಿಸಿದ್ಧಾರೆ.
ಒಟ್ನಲ್ಲಿ ಅತಿ ಸೂಕ್ಷ್ಮ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸಿದ್ದ ಯಡಿಯೂರಪ್ಪಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಮುಂದಿನ ಹಂತದ ವಿಚಾರಣೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ