Haveri News: ಹಿಂದೂ ಯುವತಿಯ ಕೊಲೆ ಪ್ರಕರಣದಲ್ಲಿ ನಯಾಜ್ ಎನ್ನುವ ಯುವಕನ ಬಂಧನವಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ 21 ವರ್ಷದ ಯುವತಿ ಸ್ವಾತಿ ಕೊಲೆಯಾದ ನತದೃಷ್ಟೆಯಾಗಿದ್ದಾಳೆ. ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ವಾತಿಯು ಕಳೆದ ಮಾರ್ಚ್ 3 ರಂದು ನಾಪತ್ತೆಯಾಗಿದ್ದಳು. ಬಳಿಕ ತಾಯಿ ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದರು. ಎಲ್ಲ ಕಡೆಗಳಲ್ಲಿ ಶೋಧ ನಡೆಸಿದ್ದ ಅವರು ಮಾರ್ಚ್ 7ರಂದು ಹಿರೇಕೇರೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಆದರೆ ಈ ಮೊದಲೇ ಅಂದರೆ ಮಾರ್ಚ್ 6 ರಂದು ಅಪರಿಚಿತ ಶವವೊಂದನ್ನು ರಾಣೆಬೆನ್ನೂರು ತಾಲೂಕಿನ ಪತ್ತೇಪುರದ ಬಳಿಯ ತುಂಗಭದ್ರಾ ನದಿಯ ಸಮೀಪ ಪತ್ತೆ ಹಚ್ಚಿದ್ದರು. ಆದರೆ ಅದೊಂದು ಅಪರಿಚಿತ ಶವವೆಂದು ಪೊಲೀಸರೇ ಸ್ವಾತಿಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಅಂತ್ಯ ಸಂಸ್ಕಾರ ಮಾಡಿದ್ದರು.
ಇದಾದ ನಂತರ ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಸ್ವಾತಿ ಗುರುತನ್ನು ಪತ್ತೆ ಹಚ್ಚಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯುವತಿಯ ಕೊಲೆಯಾಗಿರುವುದು ತಿಳಿದು ಬಂದಿದೆ. ಇನ್ನೂ ಕೊಲೆಯಾಗಿರುವ ಸ್ವಾತಿ ತಂದೆಯನ್ನು ಕಳೆದುಕೊಂಡಿದ್ದಳು, ತಾಯಿ ಜೊತೆ ವಾಸವಿದ್ದಳು. ಘಟನೆಗೆ ಸಂಬಂಧ ಮೂವರ ಮೇಲೆ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಹಲಗೇರಿ ಪೊಲೀಸರು ತೀವ್ರಗೊಳಿಸಿದ್ದಾರೆ. ಅಲ್ಲದೆ ವಶಕ್ಕೆ ಪಡೆದ ಯುವಕ ಮುಸ್ಲಿಂ ಆಗಿರುವುದರಿಂದ ಕೋಮು ಬಣ್ಣಕ್ಕೆ ತಿರುಗಿರುವ ಈ ಪ್ರಕರಣದ ಕುರಿತು ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ಸ್ವಾತಿ ಅಭಿಯಾನ ಆರಂಭಿಸಿವೆ. ಈ ಮೂಲಕ ಹಂತಕರನ್ನು ಪತ್ತೆ ಹಚ್ಚಿ, ಶಿಕ್ಷೆ ವಿಧಿಸುವಂತೆ ಆಗ್ರಹಿಸುತ್ತಿವೆ.
ಒಟ್ನಲ್ಲಿ.. ನರ್ಸ್ ಆಗಿ ತನ್ನ ವೃತ್ತಿ ಜೀವನದ ಆರಂಭದ ಜೊತೆಗೆ ಭವಿಷ್ಯದ ಬದುಕಿನ ಕುರಿತು ಕನಸುಕಟ್ಟಿಕೊಂಡಿದ್ದ ಸ್ವಾತಿ ಕೊಲೆಯಾಗಲು ಕಾರಣ ಏನು ಎಂಬ ವಿಚಾರ ಇನ್ನಷ್ಟೇ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಆದರೆ ತಮ್ಮ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗುವ ಮೊದಲೇ ಶವವನ್ನು ಪತ್ತೆ ಹಚ್ಚಿದ್ದ ಪೊಲೀಸರು ದೂರು ದಾಖಲಿಸುವ ವೇಳೆಯೇ ಸ್ವಾತಿ ಮನೆಯವರಿಗೆ ಮಾಹಿತಿಯನ್ನ ನೀಡದೆ ಯಡವಟ್ಟು ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಇದರಿಂದ ಖಾಕಿಗೂ ಇದೀಗ ಸಂಕಷ್ಟ ಎದುರಾಗಿದೆ. ಅದೇನೆ ಇರಲಿ.. ಸ್ವಾತಿಯ ಕೊಲೆ ಪ್ರಕರಣದಲ್ಲಿ ಪಾರದರ್ಶಕ ತನಿಖೆಯಾಗಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಇನ್ನೂ ಬಾಳಿ ಬದುಕಿ, ತಾಯಿಯ ಆಸೆಯನ್ನ ಈಡೇರಿಸುವುದರ ಜೊತೆಗೆ ನರ್ಸ್ ಆಗಿ ಜನರ ಸೇವೆ ಮಾಡಬೇಕೆಂದಿದ್ದ ಸ್ವಾತಿ ದುರುಳರ ಕೈಗೆ ಸಿಲುಕಿ ಉಸಿರು ನಿಲ್ಲಿಸಿದ್ದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ..




