ಯಾಣ. ಉತ್ತರ ಕನ್ನಡದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಕುಮಟಾ ಜಿಲ್ಲೆಯ ಬಳಿಯ ಕಾಡಿನ ಮಧ್ಯ ಇರುವ ದೇವ ತಾಣವೇ ಯಾಣ.
ಯಾಣವು ಮೊನಚಾಗಿರುವ ಬೆಟ್ಟದಂತಿರುವ ಶಿಲೆಗಳ 61 ಶಿಖರಗಳನ್ನ ಒಳಪಟ್ಟಿದೆ. ಇದರಲ್ಲಿ 61 ಶಿಖರಗಳಿದ್ದರೂ ಕೂಡ, ಭೈರವೇಶ್ವರ ಶಿಖರ, ಮೋಹಿನಿ ಶಿಖರ ಮತ್ತು ಬೆಟ್ಟದ ಭೈರವೇಶ್ವರ ದೇವಾಲಯ ಹೆಚ್ಚಿನ ಪ್ರಖ್ಯಾತಿ ಪಡೆದಿದೆ. ಇವುಗಳಿಂದ ಸ್ವಲ್ಪ ದೂರದಲ್ಲಿ ಅಘನಾಶಿನಿ ನದಿಯ ಹಿನ್ನೀರಿನ ಜಲಪಾತವಿದೆ.

ಭೈರವೇಶ್ವರ ಶಿಖರ ಸುಮಾರು 120 ಮೀಟರ್‌ಗಳಷ್ಟು ಎತ್ತರವಿದೆ. ಮೋಹಿನಿ ಶಿಖರ 90 ಮೀಟರ್ ಎತ್ತರವಿದೆ.
ಭಸ್ಮಾಸುರನ ವಧೆಯ ಕಥೆಯಲ್ಲಿ ಯಾಣದ ಪೌರಾಣಿಕತೆಯನ್ನ ನಾವು ಕಾಣಬಹುದು. ಭಸ್ಮಾಸುರ ಶಿವನ ಕುರಿತು ತಪಸ್ಸು ಮಾಡುತ್ತಾನೆ. ಭಸ್ಮಾಸುರನ ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದಾಗ, ತಾನು ಯಾವ ವಸ್ತುವಿನ ಮೇಲೆ ಕೈ ಇಡುತ್ತೇನೋ ಆ ವಸ್ತುವೆಲ್ಲ ಭಸ್ಮವಾಗಬೇಕೆಂಬ ವರ ಕೇಳುತ್ತಾನೆ.
ತಪಸ್ಸಿಗೆ ಪ್ರಸನ್ನನಾಗಿದ್ದ ಶಿವ ಹಿಂದೆ ಮುಂದೆ ಯೋಚಿಸದೇ, ಭಸ್ಮಾಸುರ ಕೇಳಿದ ವರ ಕೊಟ್ಟೇ ಬಿಡುತ್ತಾನೆ. ಇದನ್ನ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ ಭಸ್ಮಾಸುರ, ಆ ವರವನ್ನ ಶಿವನ ಮೇಲೆಯೇ ಪ್ರಯೋಗಿಸಲು ಹೋಗುತ್ತಾನೆ.

ಇದರಿಂದ ತಪ್ಪಿಸಿಕೊಳ್ಳಲು ಶಿವ ವಿಷ್ಣುವಿನ ಬಳಿ ಓಡುತ್ತಾನೆ. ನಡೆದ ಘಟನೆ ವಿವರಿಸಿ, ಪರಿಹಾರ ಕೇಳುತ್ತಾನೆ. ಆಗ ಭಗವಾನ್ ವಿಷ್ಣು, ಮೋಹಿನಿ ರೂಪ ತಾಳಿ, ಭಸ್ಮಾಸುರನ ಬಳಿ ಹೋಗುತ್ತಾನೆ.
ಸುಂದರ ಚೆಲುವೆಯನ್ನ ಕಂಡ ಭಸ್ಮಾಸುರ ಆಕೆಯ ಮೈಮಾಟಕ್ಕೆ ಮಾರುಹೋಗುತ್ತಾನೆ. ಆಕೆ ಹೇಳಿದಂತೆ ಕೇಳುತ್ತಾನೆ. ಆಗ ಮೋಹಿನಿ ರೂಪದಲ್ಲಿರುವ ವಿಷ್ಣು, ಇದೇ ಸರಿಯಾದ ಸಮಯವೆಂದು ತಿಳಿದು, ತಾನು ಕುಣಿದಂತೆ ನೀನೂ ಕುಣಿಯಬೇಕೆಂದು ಭಸ್ಮಾಸುರನಿಗೆ ಹೇಳುತ್ತಾನೆ. ಇದಕ್ಕೆ ಒಪ್ಪಿದ ಭಸ್ಮಾಸುರ ಮೋಹಿನಿಯೊಂದಿಗೆ ಹೆಜ್ಜೆ ಹಾಕುತ್ತ ತನ್ನ ತಲೆಯ ಮೇಲೆ ಕೈಯನ್ನಿರಿಸಿಕೊಂಡು ತಾನೇ ಗಿಟ್ಟಿಸಿಕೊಂಡ ವರದಿಂದ ನಿಂತಲ್ಲೇ ಸುಟ್ಟು ಭಸ್ಮವಾಗುತ್ತಾನೆ.

ಹಿಂದೂ ಪುರಾಣದ ಪ್ರಕಾರ ಅಂದು ಶಿವ ಮತ್ತು ಮೋಹಿನಿ ನಿಂತ ಜಾಗವನ್ನ ಯಾಣ ಅಂತಾ ಕರೆಯಲಾಗತ್ತೆ. ಶಿವ ನಿಂತ ಜಾಗವನ್ನ ಭೈರವೇಶ್ವರ ಶಿಖರ, ಮೋಹಿನಿ ನಿಂತ ಜಾಗವನ್ನ ಮೋಹಿನಿ ಶಿಖರ ಎಂದು ಕರೆಯಲಾಗತ್ತೆ.
ಇನ್ನು ಭೈರವೇಶ್ವರ ಶಿಖರದ ಕೆಳಗೆ ಸ್ವಯಂಭೂಲಿಂಗವಿದೆ. ಇದೇ ಜಾಗದಲ್ಲಿ ದೇವಸ್ಥಾನವನ್ನ ಕಟ್ಟಲಾಗಿದ್ದು, ಇದು ಬೆಟ್ಟದ ಭೈರವೇಶ್ವರ ದೇವಸ್ಥಾನವೆಂದೇ ಖ್ಯಾತಿ ಪಡೆದಿದೆ.
ಈ ದೇವಾಲಯದ ಬೆಟ್ಟದ ಒಳಗೆ ಶಿವಲಿಂಗದ ಮೇಲೆ ಅಭಿಶೇಕದಂತೆ ನೀರು ಜಿನುಗುತ್ತದೆ. ಹೀಗೆ ವರ್ಷವಿಡೀ ಜಿನುಗುವ ನೀರು ಚಂಡಿಕಾ ಹೊಳೆಯಾಗಿ ಹರಿದು, ಅಘನಾಶಿನಿ ನದಿ ಸೇರುತ್ತದೆ.

ಶಿವರಾತ್ರಿಗೆ ಯಾಣಕ್ಕೆ ಹಲವು ಕಡೆಯಿಂದ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿ ಸಮಯದಲ್ಲಿ ಹತ್ತು ದಿನಗಳ ಕಾಲ ಉತ್ಸವ ನಡೆಯುತ್ತದೆ. ಅಲ್ಲದೇ, ಶಿವರಾತ್ರಿ ವೇಳೆಗೆ ಶಿವಲಿಂಗದ ಮೇಲೆ ಜಿನುಗುವ ನೀರನ್ನು ಗೋಕರ್ಣದ ಮಹಾಬಲೇಶ್ವರನ ಅಭಿಷೇಕಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
ಈ ಸ್ಥಳಕ್ಕೆ ಯಾಣ ಎಂದು ಹೆಸರು ಬರಲು ಕಾರಣವೇನೆಂದರೆ, ಮೊದಲಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಜನ ತೀರ್ಥಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗೆ ಹೋಗುವಾಗ ಎಲ್ಲಿ ಹೋಗುತ್ತಿದ್ದೀರೆಂದು ಬ್ರಿಟಿಷರು ಕೇಳಿದಾಗ, ಯಾನ ಹೋಗುತ್ತಿದ್ದೇವೆಂದು ಹೇಳುತ್ತಿದ್ದರಂತೆ. ಯಾನ ಎಂದರೆ ಪಯಣ ಎಂದರ್ಥ. ಆದ್ರೆ ಭಕ್ತಾದಿಗಳು ಹೋಗುವ ಸ್ಥಳದ ಹೆಸರೇ ಯಾಣ ಎಂದು ತಿಳಿದ ಬ್ರಿಟಿಷರು ಈ ಧರ್ಮಕ್ಷೇತ್ರವನ್ನ ಯಾಣ ಎಂದು ಕರೆಯಲು ಶುರುಮಾಡಿದರಂತೆ. ಅಂದಿನಿಂದ ಈ ಸ್ಥಳ ಯಾಣ ಎಂದೇ ಪ್ರಸಿದ್ಧಿಯಾಯಿತು.