ಕೋಲಾರ : ತನಗೆ ಬಿಜೆಪಿ ಟಿಕೇಟ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದ ಹೂಡಿ ವಿಜಯ್ ಕುಮಾರ್‌ಗೆ ಟಿಕೇಟ್ ಕೈ ತಪ್ಪಿಹೋಗಿದೆ. ಈ ಹಿನ್ನೆಲೆಯಲ್ಲಿ ರೆಬೆಲ್ ಆಗಿರುವ ಹೂಡಿ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ತಮಗೆ ಟಿಕೇಟ್ ಸಿಗದ ಕಾರಣಕ್ಕೆ ಹೂಡಿ ವಿಜಯ್, ನಿನ್ನೆಯಷ್ಟೇ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇಂದು ಬಿಜೆಪಿ ವಿರುದ್ಧ ಸೆಡ್ಡು ಹೊಡೆದಿರುವ ವಿಜಯ್ ಕುಮಾರ್, ಪಕ್ಷೇತರರಾಗಿ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದು, ಮಾಲೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹೂಡಿ ವಿಜಯ್, ಮಾಲೂರಿನಲ್ಲಿ ಜಾತಿ ರಾಜಕೀಯ ಮಾಡುತ್ತಿದ್ದು ನಮ್ಮ ಜಾತಿಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ನಮ್ಮದು ಸಣ್ಣ ಜನಾಂಗ ಅಂತ ನೆಗ್ಲೆಟ್ ಮಾಡ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಜನಾಂಗದ್ದು 40 ಲಕ್ಷ ಜನರಿದ್ದಾರೆ. ಆದ್ರೆ ಬಿಜೆಪಿಯಲ್ಲಿ ಇದುವರೆಗೂ ಒಬ್ಬರು ಶಾಸಕರು ಆಗಿಲ್ಲ, ನಿಗಮ ಮಂಡಳಿ ಸ್ಥಾನವನ್ನೂ ಕೊಟ್ಟಿಲ್ಲ. ನಮ್ಮ ಜನಾಂಗಕ್ಕೆ ಯಾವುದೇ ಸೌಲಭ್ಯಗಳನ್ನು ಕೊಟ್ಟಿಲ್ಲ. ಹಾಗಾಗಿ ಮಾಲೂರಿನಲ್ಲಿ ನಾನು ಶಾಸಕನಾಗಬೇಕೆಂದು ನಮ್ಮ ಜನಾಂಗದವರು ಇಚ್ಛೆ ಪಟ್ಟಿದ್ದಾರೆ. ಆದ್ರೆ ಇಲ್ಲಿ ಜಾತಿ ವಿಚಾರದಲ್ಲಿ ಗೊಂದಲಗಳನ್ನು ಸೃಷ್ಟಿಮಾಡುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೇ ನನಗೆ ಟಿಕೇಟ್ ಸಿಗದಿದ್ದಲ್ಲಿ, ನಮ್ಮ ಕಾರ್ಯಕರ್ತರೊಂದಿಗೆ ಈ ಬಗ್ಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.