ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್‌ನ ವೋಲ್ವೊ ಬಸ್ ಭೀಕರ ಅಪಘಾತಕ್ಕೊಳಗಾಗಿ ಭಾರಿ ಬೆಂಕಿಗಾಹುತಿಯಾಗಿದೆ. ಈ ದುರ್ಘಟನೆಯಲ್ಲಿ 20 ಮಂದಿ ಸಜೀವ ದಹನವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಘಟನೆ ಬೆಳಗಿನ ಜಾವ 3.30ರ ಸುಮಾರಿಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರ ಮೇಲೆ ನಡೆದಿದೆ. ವರದಿಗಳ ಪ್ರಕಾರ, ಬಸ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದೊಯ್ದ ನಂತರ, ತೀವ್ರವಾಗಿ ಬೆಂಕಿ ಹೊತ್ತಿಕೊಂಡಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹರಿಕಾ ಎಂಬ ಮಹಿಳೆ ಈ ಪ್ರತಿಕ್ರಿಯಿಸಿದ್ದಾರೆ. ನಾನು ನಿದ್ರಿಸುತ್ತಿದ್ದೆ. ಏಕಾಏಕಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿಯ ಜ್ವಾಲೆಯಿಂದ ಎಚ್ಚರವಾಯಿತು. ಏನು ನಡೆಯುತ್ತಿದೆ ಎಂದು ನೋಡುತ್ತಿದ್ದಂತೆಯೇ ಬೆಂಕಿ ವೇಗವಾಗಿ ಹರಡಿತ್ತು. ತಕ್ಷಣ ಬಸ್‌ನ ಹಿಂಭಾಗದ ಗಾಜು ಒಡೆದು ಕೆಳಗೆ ಹಾರಿದೆ ಎಂದು ವಿವರಿಸಿದ್ದಾರೆ.
ಬಸ್‌ನಿಂದ ಓಡಿಹೋಗುವ ಪ್ರಯಾಣಿಕರಿಗೆ ಇತರ ಸೀಟುಗಳಲ್ಲಿ ಜನರು ಇದ್ದರೋ ಇಲ್ಲವೋ ಎಂದು ನೋಡುವುದು ಕಷ್ಟವಾಗಿತ್ತು. ಇದು ಸ್ಲೀಪರ್ ಬಸ್ ಆಗಿರುವುದರಿಂದ, ನಾವು ಹತ್ತಿ ಮಲಗಿದ್ದೆವು. ಪರದೆಗಳಿಂದಾಗಿ ಎಷ್ಟು ಜನ ಇದ್ದಾರೆ ಎಂಬುದು ತಿಳಿಯಲಿಲ್ಲ ಎಂದು ಹರಿಕಾ ಹೇಳಿದ್ದಾರೆ. ತಮ್ಮ ತುರ್ತು ನಿರ್ಧಾರದ ಫಲವಾಗಿ, ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗುವ ಮುನ್ನವೇ ಅವರು ಪಾರಾಗಲು ಸಾಧ್ಯವಾಯಿತು ಎಂದಿದ್ದಾರೆ.
ಇನ್ನೊಬ್ಬ ಪ್ರಯಾಣಿಕ ಸೂರ್ಯ ಅವರು ಕೂಡ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ. ಬೆಳಗಿನ ಜಾವ 2.45ರ ಸುಮಾರಿಗೆ ಏನೋ ಜೋರಾಗಿ ಹೊಡೆದ ಶಬ್ದ ಕೇಳಿಸಿತು. ಒಂದು ಬೈಕ್ ಬಸ್ಸಿನ ಕೆಳಗೆ ನುಗ್ಗಿತ್ತು. ಬೆಂಕಿ ಕಿಡಿ ಬರ್ತಾಯಿತ್ತು. ತಕ್ಷಣವೇ ಜೋರಾಗಿ ಬೆಂಕಿ ಹೊತ್ತಿಕೊಂಡಿದೆ. ಎಚ್ಚರವಿದ್ದವರು ತಕ್ಷಣ ಬಸ್ಸಿನಿಂದ ಇಳಿದರು. ಆದರೆ ಕೆಲವು ಪ್ರಯಾಣಿಕರು ಹೊರಬರಲು ಸಾಧ್ಯವಾಗಲಿಲ್ಲ. ಕೆಲವು ಶವಗಳನ್ನು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟುಹೋಗಿದ್ದವು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ₹2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ₹50 ಸಾವಿರ ನೆರವು ಘೋಷಿಸಿದ್ದಾರೆ. ಇದಕ್ಕೂ ಹೆಚ್ಚು ಸುರಕ್ಷತೆಗಾಗಿ ಕಾವೇರಿ ಟ್ರಾವೆಲ್ಸ್‌ನ ಬೆಂಗಳೂರಿನ ಶಾಖೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆದ್ರೆ ಸದ್ಯ ಈ ದುರಂತವು ದೀರ್ಘ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎಬ್ಬಿಸಿದೆ.
ವರದಿ : ಲಾವಣ್ಯ ಅನಿಗೋಳ

