ಬೆಂಗಳೂರು: ಜಿದ್ದಾಜಿದ್ದಿನ ಕಣ ಮಂಡ್ಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಏನೋ ಮುಗೀತು. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಇನ್ನು ಇವರಿಬ್ಬರಲ್ಲಿ ಯಾರ್ ಗೆಲ್ತಾರೆ ಅಂತ ಮೇ 23ರ ರಿಸಲ್ಟ್ ಗಾಗಿ ಜನ ಕಾಯ್ತಿದ್ದಾರೆ. ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಯೋಧರೊಬ್ಬರು ಹಾಕಿದ್ದ ವೋಟ್ ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ಮತದಾನದಂದು ಸಿಆರ್ಪಿಎಫ್ ಯೋಧ ಆರ್.ಸಿ ನಾಯಕ್, ಸುಮಲತಾಗೆ ವೋಟ್ ಹಾಕಿದ್ದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಬ್ಯಾಲೆಟ್ ಪೇಪರ್ನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರು. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಯೋಧನ ಪೋಸ್ಟ್ಗೆ ಖುದ್ದು ಧನ್ಯವಾದ ಅರ್ಪಿಸಿದ್ದ ಸುಮಲತಾ, ನಿಮಗೆ ತುಂಬಾ ಚಿರಋಣಿ ಅಂತ ಹೇಳಿದ್ದರು.
ಆದರೆ ಚುನಾವಣಾ ಆಯೋಗದ ಪ್ರಕಾರ ಯಾರಿಗೆ ವೋಟ್ ಹಾಕಿದ್ದೇನೆಂದು ಬಹಿರಂಗಪಡಿಸೋದು ಸೀಕ್ರೆಸಿ ಆಫ್ ವೋಟ್ (ಮತದಾನ ಗೌಪ್ಯತೆ ಕಾಯ್ಡೆ) ಅಡಿಯಲ್ಲಿ ಅಪರಾಧ. ಹೀಗಾಗಿ ಯಾರಿಗೆ ವೋಟ್ ಹಾಕಿದ್ದೇನೆಂದು ಬಹಿರಂಗಪಡಿಸಿದ ಯೋಧನ ವಿರುದ್ಧ ಅಡ್ವೊಕೇಟ್ ಕಿರಣ್ ಹಾಗೂ ಇನ್ನಿತರ ಕೆಲವು ವಕೀಲರು ಪಿಟಿಷನ್ ಸಲ್ಲಿಸಿದ್ರು. ಈ ಪ್ರಕರಣ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಇದು ಆಯೋಗದ ನಿರ್ಧಾರಕ್ಕೆ ಬಿಟಿತ್ತು. ಸದ್ಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ಚುನಾವಣಾ ಆಯೋಗ, ಯೋಧ ಆರ್.ಸಿ ನಾಯಕ್ ಮತವನ್ನ ಅಸಿಂಧುಗೊಳಿಸುವಂತೆ ಆದೇಶ ನೀಡಿದೆ. ಆ ಒಂದು ಮತವನ್ನ ಕೌಂಟಿಂಗ್ಗೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯೋಗದಿಂದ ಮಂಡ್ಯ ಡಿಸಿಗೆ ನೋಟಿಸ್ ಜಾರಿಯಾಗಿದೆ.