2023ರಲ್ಲಿ ಪ್ರಕರಣ ದಾಖಲು: 2 ‌ವರ್ಷಗಳ ನಂತರ ಶಿಕ್ಷೆ?

ಗದಗ ರಸ್ತೆಯ ಗಾಂಧಿವಾಡ ಕ್ರಾಸ್‌ನಲ್ಲಿ 2023ರಲ್ಲಿ ಸಂಭವಿಸಿದ ಮಾರಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಳೇಶ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ₹2,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದ ವಿವರಗಳ ಪ್ರಕಾರ, 2023 ರ ಜುಲೈ 23ರಂದು ಎಸ್‌ಆರ್‌ಎಸ್ ಟ್ರಾವೆಲ್ಸ್ ಸಂಸ್ಥೆಯ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಬಾಳೇಶ ಬೋರಣ್ಣವರ್ ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ರಸ್ತೆ ದಾಟುತ್ತಿದ್ದ ವಿ. ಜಾಕೋಬ್ ಸೈಲಾಸ್ ಅವರಿಗೆ ಡಿಕ್ಕಿ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡ ಸೈಲಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಧೀಶ ಯಮನಪ್ಪ ಕರೇಹನುಮಂತಪ್ಪ ಅವರು ಏಪ್ರಿಲ್ 22ರಂದು ತೀರ್ಪು ಪ್ರಕಟಿಸಿದರು. ಆರೋಪಿತ ಚಾಲಕನ ವಿರುದ್ಧ ಸಲ್ಲಿಸಲಾದ ಸಾಕ್ಷ್ಯಾಧಾರಗಳು ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಎನ್.ಸಿ. ಕಾಡದೇವರಮಠ ಡಿಸೋಜಾ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾಗಿ ಶಿಲ್ಲಿಂಗಪ್ಪ ನಾಗಠಾಣ ವಾದ ಮಂಡಿಸಿದ್ದರು.

ಈ ತೀರ್ಪು ರಸ್ತೆ ಸುರಕ್ಷತೆ ಹಾಗೂ ಅಜಾಗರೂಕ ಚಾಲನೆಯ ವಿರುದ್ಧ ಕಠಿಣ ಸಂದೇಶ ನೀಡುವಂತಾಗಿದೆ.

About The Author